kn_ta/translate/figs-metaphor/01.md

47 KiB
Raw Permalink Blame History

ವಿವರಣೆ

** ರೂಪಕ** ಎಂಬುದು ಅಲಂಕಾರವಾಗಿದೆ, ಈ ಅಲಂಕಾರದಲ್ಲಿ ಒಬ್ಬನು ಒಂದು ವಸ್ತುವಿನ ಕುರಿತು ಮಾತನಾಡುವಾಗ ಅದನ್ನು ವಿಭಿನ್ನ ವಸ್ತುವೋ ಎಂಬಂತೆ ಮಾತನಾಡುತ್ತಾನೆ ಏಕೆಂದರೆ ಜನರು ಆ ಎರಡು ವಸ್ತುಗಳು ಹೇಗೆ ಸಮಾನವಾಗಿವೆ ಎಂಬುದರ ಬಗ್ಗೆ ಯೋಚಿಸಬೇಕೆಂದು ಅವನು ಬಯಸುತ್ತಾನೆ.

ಉದಾಹರಣೆಗೆ, ಒಬ್ಬನು ಹೀಗೆ ಹೇಳಬಹುದು:

  • ನಾನು ಪ್ರೀತಿಸುವ ಹುಡುಗಿ ಕೆಂಪಾದ ಗುಲಾಬಿ.

ಹುಡುಗಿ ಮತ್ತು ಗುಲಾಬಿ ಎಂಬ ವಸ್ತುಗಳು ತುಂಬಾ ವಿಭಿನ್ನವಾದ ವಸ್ತುಗಳಾಗಿವೆ, ಆದರೆ ಮಾತನಾಡುವವನು ಅವುಗಳು ಯಾವುದೋ ಒಂದು ರೀತಿಯಲ್ಲಿ ಸಮಾನವಾಗಿವೆ ಎಂದು ಪರಿಗಣಿಸುತ್ತಾನೆ. ಅವುಗಳು ಯಾವ ರೀತಿಯಲ್ಲಿ ಸಮಾನವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದದ್ದು ಕೇಳುಗರ ಕರ್ತವ್ಯವಾಗಿದೆ.

ರೂಪಕ ಅಲಂಕಾರದ ಭಾಗಗಳು

ಮೇಲಿನ ಉದಾಹರಣೆಯು ಒಂದು ರೂಪಕಾಲಂಕಾರದಲ್ಲಿ ಮೂರು ಭಾಗಗಳಿವೆ ಎಂಬುದನ್ನು ತೋರಿಸುತ್ತದೆ. ಈ ರೂಪಕ ಅಲಂಕಾರದಲ್ಲಿ, ಮಾತನಾಡುವವನು “ತಾನು ಪ್ರೀತಿಸುವ ಹುಡುಗಿಯ” ಬಗ್ಗೆ ಮಾತನಾಡುತ್ತಿದ್ದಾನೆ. ಇದು ಉಪಮೇಯ. ಮಾತನಾಡುವವನು ಅವಳಿಗೂ ಮತ್ತು "ಕೆಂಪಾದ ಗುಲಾಬಿಗೂ" ನಡುವೆಯಿರುವ ಸಾಮ್ಯತೆ ಏನು ಎಂಬುದರ ಬಗ್ಗೆ ಕೇಳುಗನು ಯೋಚಿಸಬೇಕೆಂದು ಬಯಸುತ್ತಾನೆ. ಕೆಂಪಾದ ಗುಲಾಬಿಯು ಅವನು ಹುಡುಗಿಯನ್ನು ಹೋಲಿಸುತ್ತಿರುವುದರ ಉಪಮಾನ ಆಗಿದೆ. ಬಹುಶಃ, ಕೇಳುಗನು ಅವೆರಡೂ ಸುಂದರವಾಗಿವೆ ಎಂದು ಯೋಚಿಸಬೇಕೆಂದು ಅವನು ಬಯಸುತ್ತಾನೆ. ಇದು ಹುಡುಗಿ ಮತ್ತು ಗುಲಾಬಿ ಇವೆರಡರಲ್ಲಿರುವ ಗುಣ ಆಗಿದೆ, ಆದ್ದರಿಂದ ನಾವು ಇದನ್ನು ಹೋಲಿಕೆಯ ಅಂಶ ಎಂದೂ ಕರೆಯಬಹುದು.

ರೂಪಕ ಅಲಂಕಾರದಲ್ಲಿ ಮೂರು ಭಾಗಗಳಿವೆ:

  • ಉಪಮೇಯ, ಎಂಬುದು ಬರಹಗಾರನು/ಮಾತನಾಡುವವನು ಕೂಡಲೇ ಚರ್ಚಿಸುವಂಥ ವಿಷಯವಾಗಿದೆ.

  • ಉಪಮಾನ - ಉಪಮೇಯನ್ನು ವಿವರಿಸಲು ಮಾತನಾಡುವವನು ಬಳಸುವ ಭೌತಿಕ ವಿಷಯವಾಗಿದೆ (ವಸ್ತು, ಘಟನೆ, ಕಾರ್ಯ, ಇತ್ಯಾದಿ).

  • ಉಪಮಾನ ಮತ್ತು ಉಪಮೇಯ ಹೇಗೆ ಸಾಮ್ಯತೆ ಉಳ್ಳವುಗಳಾಗಿವೆ ಎಂಬುದನ್ನು ಯೋಚಿಸುವಾಗ ಭೌತಿಕ ಉಪಮಾನವು ಕೇಳುಗರ ಮನಸ್ಸಿನಲ್ಲಿ ಉಂಟುಮಾಡುವ ಭಾವವಾಚಕ ಪರಿಕಲ್ಪನೆ ಅಥವಾ ಲಕ್ಷಣವೇ ಗುಣ ಆಗಿದೆ. ಅನೇಕಸಾರಿ, ರೂಪಕ ಅಲಂಕಾರದಲ್ಲಿರುವ ಗುಣವನ್ನು ಸತ್ಯವೇದದಲ್ಲಿ ಸ್ಪಷ್ಟವಾಗಿ ಬರೆಯಲಾಗಿಲ್ಲ, ಆದರೆ ಸಂದರ್ಭವೇ ಇದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಕೇಳುಗರು ಅಥವಾ ಓದುಗರು ತಾವೇ ಗುಣದ ಕುರಿತು ಯೋಚಿಸಬೇಕಾಗುತ್ತದೆ.

** ರೂಪಕ ಅಲಂಕಾರ** ಎಂಬುದು ಭೌತಿಕ ಉಪಮಾನವನ್ನು ಬಳಸಿಕೊಂಡು ಮಾತನಾಡುವವನು ಹೇಳುತ್ತಿರುವ ಉಪಮೇಯಕ್ಕೆ ಭಾವವಾಚಕ ಗುಣವನ್ನು ಅನ್ವಯಿಸುವ ಅಲಂಕಾರವಾಗಿದೆ ಎಂದು ಈ ಪದಗಳನ್ನು ಬಳಸಿಕೊಂಡು ನಾವು ಹೇಳಬಹುದು.

ಸಾಮಾನ್ಯವಾಗಿ, ಉಪಮೇಯದ ಬಗ್ಗೆ ಏನನ್ನಾದರೂ ವ್ಯಕ್ತಪಡಿಸಲು ಬರಹಗಾರನು ಅಥವಾ ಮಾತನಾಡುವವನು ಉಪಮೇಯ ಮತ್ತು ಉಪಮಾನದ ನಡುವೆಯಿರುವ ಕನಿಷ್ಠ ಒಂದು ಹೋಲಿಕೆಯ ಅಂಶದ (ಗುಣ) ಒಟ್ಟಿಗೆ ರೂಪಕ ಅಲಂಕಾರವನ್ನು ಬಳಸುತ್ತಾನೆ. ಸಾಮಾನ್ಯವಾಗಿ ರೂಪಕ ಅಲಂಕಾರಗಳಲ್ಲಿ, ಉಪಮೇಯವನ್ನು ಮತ್ತು ಉಪಮಾನವನ್ನು ಸ್ಪಷ್ಟವಾಗಿ ತಿಳಿಸುತ್ತಾರೆ, ಆದರೆ ಗುಣವನ್ನು ಮಾತ್ರ ಸೂಚಿಸುತ್ತಾರೆ. ಉಪಮೇಯ ಮತ್ತು ಉಪಮಾನದ ನಡುವೆಯಿರುವ ಸಾಮ್ಯತೆಯ ಬಗ್ಗೆ ಯೋಚಿಸುವುದಕ್ಕೆ ಮತ್ತು ತಿಳಿಸಲ್ಪಟ್ಟಿರುವ ಗುಣವನ್ನು ತಾವೇ ಗ್ರಹಿಸಿಕೊಳ್ಳುವುದಕ್ಕೆ ಓದುಗರನ್ನು/ಕೇಳುಗರನ್ನು ಆಹ್ವಾನಿಸಲು ಬರಹಗಾರನು/ಮಾತನಾಡುವವನು ಹೆಚ್ಚಾಗಿ ರೂಪಕ ಅಲಂಕಾರವನ್ನು ಬಳಸುತ್ತಾನೆ.

ಮಾತನಾಡುವವರು ತಮ್ಮ ಸಂದೇಶವನ್ನು ಬಲಗೊಳಿಸಲು, ತಮ್ಮ ಭಾಷೆಯನ್ನು ಹೆಚ್ಚು ಸ್ಪಷ್ಟಗೊಳಿಸಲು, ತಮ್ಮ ಭಾವನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಲು, ಬೇರೆ ರೀತಿಯಲ್ಲಿ ಹೇಳಲು ಕಷ್ಟಕರವಾದದ್ದನ್ನು ಹೇಳಲು ಅಥವಾ ಜನರು ತಮ್ಮ ಸಂದೇಶವನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡಲು ರೂಪಕ ಅಲಂಕಾರಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಕೆಲವೊಮ್ಮೆ ಮಾತನಾಡುವವರು ತಮ್ಮ ಭಾಷೆಯಲ್ಲಿ ಬಹಳ ಸಾಮಾನ್ಯವಾಗಿರುವ ರೂಪಕ ಅಲಂಕಾರಗಳನ್ನು ಬಳಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ಮಾತನಾಡುವವರು ಅಸಾಮಾನ್ಯವಾದ ರೂಪಕ ಅಲಂಕಾರಗಳನ್ನು, ವಿಶಿಷ್ಟವಾಗಿರುವ ಇನ್ನೂ ಕೆಲವು ರೂಪಕ ಅಲಂಕಾರಗಳನ್ನು ಸಹ ಬಳಸುತ್ತಾರೆ. ಒಂದು ರೂಪಕ ಅಲಂಕಾರವು ಒಂದು ಭಾಷೆಯಲ್ಲಿ ಬಹಳ ಸಾಮಾನ್ಯವಾಗಿ ಬಿಟ್ಟಾಗ, ಅದು “ನಿಷ್ಕ್ರಿಯ” ರೂಪಕ ಅಲಂಕಾರವಾಗುತ್ತದೆ, ಅಸಾಮಾನ್ಯವಾದ ರೂಪಕ ಅಲಂಕಾರಗಳಿಗೆ ವ್ಯತಿರಿಕ್ತವಾಗಿ, ಇದನ್ನು ನಾವು “ಸಕ್ರಿಯ” ರೂಪಕ ಅಲಂಕಾರ ಎಂದು ವಿವರಿಸುತ್ತೇವೆ. ಪ್ರತಿಯೊಂದು ನಿಷ್ಕ್ರಿಯ ರೂಪಕ ಅಲಂಕಾರಗಳು ಮತ್ತು ಸಕ್ರಿಯ ರೂಪಕ ಅಲಂಕಾರಗಳು ವಿಭಿನ್ನ ರೀತಿಯ ಭಾಷಾಂತರದ ಸಮಸ್ಯೆಯನ್ನು ತಂದೊಡ್ಡುತ್ತವೆ, ಅದನ್ನು ನಾವು ಮುಂದೆ ಚರ್ಚಿಸಲಿದ್ದೇವೆ.

ನಿಷ್ಕ್ರಿಯ ರೂಪಕ ಅಲಂಕಾರಗಳು

ಈ ನಿಷ್ಕ್ರಿಯ ರೂಪಕ ಅಲಂಕಾರವು ಒಂದು ಭಾಷೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಅಲಂಕಾರವಾಗಿದೆ, ಆ ಭಾಷೆಯನ್ನು ಮಾತನಾಡುವವರು ಅದನ್ನು ಒಂದು ಪರಿಕಲ್ಪನೆಗೆ ಬದಲಾಗಿ ಇನ್ನೊಂದು ಪರಿಕಲ್ಪನೆಯನ್ನು ಸೂಚಿಸುತ್ತದೆ ಎಂದು ಪರಿಗಣಿಸುವುದಿಲ್ಲ. ಭಾಷಾಶಾಸ್ತ್ರಜ್ಞರು ಸಾಮಾನ್ಯವಾಗಿ ಇವುಗಳನ್ನು "ಮೃತ ರೂಪಕಗಳು" ಎಂದು ಕರೆಯುತ್ತಾರೆ. ನಿಷ್ಕ್ರಿಯ ರೂಪಕ ಅಲಂಕಾರಗಳು ಸರ್ವೇ ಸಾಧಾರಣವಾಗಿವೆ. ಇದಕ್ಕೆ ಇಂಗ್ಲೀಷ್ ಭಾಷೆಯಲ್ಲಿನ ಉದಾಹರಣೆಗಳೆಂದರೆ “ಮೇಜಿನ ಕಾಲು“ "ವಂಶ ವೃಕ್ಷ" "ಪುಸ್ತಕದ ಎಲೆ" (ಅಂದರೆ ಒಂದು ಪುಸ್ತಕದ ಹಾಳೆ), ಅಥವಾ "ಕ್ರೇನ್" (ಭಾರವಾದ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಯಂತ್ರ). ಇಂಗ್ಲೀಷ್ ಮಾತನಾಡುವವರು ಇಂತಹ ಪದಗಳಿಗೆ ಒಂದು ಅರ್ಥಕ್ಕಿಂತ ಹೆಚ್ಚು ಅರ್ಥವಿದೆ ಎಂದು ಯೋಚಿಸುವರು. ಉದಾಹರಣೆಗೆ ಸತ್ಯವೇದದ ಹಿಬ್ರೂ ಭಾಷೆಯಲ್ಲಿ "ಕೈ" ಎನ್ನುವುದು "ಬಲವನ್ನು" ಸೂಚಿಸುತ್ತದೆ, "ಮುಖ" ಎನ್ನುವುದು "ಪ್ರಸನ್ನತೆಯನ್ನು" ಸೂಚಿಸುತ್ತದೆ ಮತ್ತು ಭಾವನೆಗಳನ್ನು ಅಥವಾ ನೈತಿಕ ಗುಣಲಕ್ಷಣಗಳನ್ನು ಬಗ್ಗೆ ತಿಳಿಸುವಾಗ "ವಸ್ತ್ರ ಧರಿಸುವುದು" ಎಂಬಂತೆ ಬಳಸುತ್ತಾರೆ.

ವಿನ್ಯಾಸಿತ ಜೋಡಿ ಪರಿಕಲ್ಪನೆಗಳು ರೂಪಕ ಅಲಂಕಾರದಂತೆ ಕಾರ್ಯನಿರ್ವಹಿಸುತ್ತವೆ

ರೂಪಕವಾಗಿ ಮಾತನಾಡುವ ರೀತಿಗಳು ಜೋಡಿ ಪರಿಕಲ್ಪನೆಗಳನ್ನು ಅವಲಂಬಿಸಿರುತ್ತದೆ, ಅದರಲ್ಲಿರುವ ಒಂದು ಪರಿಕಲ್ಪನೆಯು ಅದರಲ್ಲಿರುವ ಇನ್ನೊಂದು ಪರಿಕಲ್ಪನೆಯನ್ನು ಸೂಚಿಸುತ್ತದೆ. ಉದಾಹರಣೆಗೆ ಇಂಗ್ಲೀಷಿನಲ್ಲಿ ಮೇಲೆ/ಏರು (ಆಪ್) ಎಂಬ ದಿಕ್ಕು ಸೂಚಿ ಹೆಚ್ಚು ಅಥವಾ ಉತ್ತಮ (ಕಲ್ಪನೆ) ಎಂಬ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಏಕೆಂದರೆ ಈ ಅದರಲ್ಲಿರುವ ಜೋಡಿ ಪರಿಕಲ್ಪನೆಗಳ ಮೂಲಕ ನಾವು ಈ ಕೆಳಗಿನಂತಹ ವಾಕ್ಯಗಳ ರಚನೆಗಳನ್ನು ಮಾಡಬಹುದು: "ಇಂಧನದ ಬೆಲೆ ಏರಿಕೆ ಆಗುತ್ತಿದೆ," "ಒಬ್ಬ ಅತಿ ಬುದ್ಧಿವಂತನಾದ ಮನುಷ್ಯ" ಮತ್ತು ಕೆಲವೊಮ್ಮೆ ವ್ಯತಿರಿಕ್ತವಾದ ವಿಚಾರಗಳನ್ನು ಮಾಡಬಹುದು: "ತಾಪಮಾನ ಕುಸಿಯುತ್ತಿದೆ" ಮತ್ತು "ನಾನು ತುಂಬಾ ಕುಗ್ಗಿದವನಂತೆ ಭಾವಿಸುತ್ತಿದ್ದೇನೆ."

ಜಾಗತಿಕವಾಗಿ ಬಳಸುವ ಭಾಷೆಗಳಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ರೂಪಕವಾದ ಉದ್ದೇಶಗಳಿಗಾಗಿ ನಿರಂತರವಾಗಿ ಬಳಸುತ್ತಾರೆ, ಯಾಕೆಂದರೆ ಆಲೋಚನೆಯನ್ನು ಕ್ರಮವಾಗಿಡಲು ಇವು ಅನುಕೂಲವಾಗಿವೆ. ಸಾಮಾನ್ಯವಾಗಿ ಜನರು ಭಾವವಾಚಕ ಗುಣಗಳನ್ನು ಕುರಿತು ಮಾತನಾಡುವಾಗ (ಬಲ , ಅಸ್ಥಿತ್ವ , ಭಾವನೆಗಳು, ನೈತಿಕಗುಣಗಳು) ಇವುಗಳನ್ನು ದೇಹದ ಅಂಗಾಂಗಗಳೋ, ಅಥವಾ ಕಣ್ಣಿಗೆ ಕಾಣುತ್ತಿರುವ ಅಥವಾ ಮುಟ್ಟಬಹುದಾದಂಥ ವಸ್ತುಗಳೋ, ಅಥವಾ ನೋಡಬಹುದಾದಂಥ ನಡೆಯುತ್ತಿರುವ ಘಟನೆಗಳೋ ಎಂಬಂತೆ ಮಾತನಾಡುತ್ತಾರೆ.

ಈ ಅಲಂಕಾರಗಳನ್ನು ಸಾಮಾನ್ಯ ರೀತಿಯಲ್ಲಿ ಬಳಸುವಾಗ ಮಾತನಾಡುವ ವ್ಯಕ್ತಿ ಅಥವಾ ಶ್ರೋತೃಗಳು ಇವುಗಳನ್ನು ಅಲಂಕಾರಿಕ ಭಾಷೆಯೆಂದು ಎಣಿಸುವರು. ಇಂಗ್ಲೀಷ್ ಭಾಷೆಯಲ್ಲಿ ಕೆಲವು ರೂಪಕ ಅಲಂಕಾರಗಳು ಪರಿಗಣೆನೆಗೆ ಬಾರದೆ ಉಳಿದಿರುವ ಅಂತಹವು:

  • "ಶಾಖವನ್ನು ಏರಿಸು. ಏರಿಸು ಎಂಬ ಪದವನ್ನು ಹೆಚ್ಚಿಸು ಎಂಬಂತೆ ಮಾತನಾಡುತ್ತಾರೆ.
  • "ನಾವು ನಮ್ಮ ವಾದವನ್ನು ಮುಂದುವರೆಸೋಣ". ಯೋಜಿಸಿದಂತೆ ಮಾಡುವುದನ್ನು ಮುನ್ನಡೆಯೋಣ ಅಥವಾ ಮುಂದುವರೆಸೋಣ ಎಂಬಂತೆ ಮಾತನಾಡುತ್ತಾರೆ.
  • "ನೀವು ನಿಮ್ಮ ವಾದವನ್ನು ಚೆನ್ನಾಗಿ ಸಮರ್ಥಿಸಿಕೊಂಡಿರಿ". ಕೆಲವೊಮ್ಮೆ ವಾದವಿವಾದವನ್ನು ಯುದ್ಧವು ಎಂಬಂತೆ ಪರಿಗಣಿಸಿ ಮಾತನಾಡುವರು.
  • "ಪದಗಳ ಹರಿವು" ಎಂಬುದರಲ್ಲಿ ಪದಗಳನ್ನು ದ್ರವ್ಯವೋ ಎಂಬಂತೆ ಮಾತನಾಡುತ್ತಾರೆ.

ಇಂಗ್ಲೀಷ್ ಭಾಷೆ ಮಾತನಾಡುವವರು ಇವುಗಳನ್ನು ರೂಪಕವಾದ ಅಭಿವ್ಯಕ್ತಿಗಳಾಗಿ ಅಥವಾ ಅಲಂಕಾರಿಕ ಭಾಷೆಯಾಗಿ ಪರಿಗಣಿಸುವುದಿಲ್ಲ, ಹಾಗಾಗಿ ಇವುಗಳನ್ನು ಜನರು ಅಲಂಕಾರಿಕ ಭಾಷೆಯ ಎಂದು ವಿಶೇಷ ಗಮನ ನೀಡುವಂತೆ ಇತರ ಭಾಷೆಗಳಲ್ಲಿ ಭಾಷಾಂತರಿಸುವುದು ತಪ್ಪಾಗಿರುತ್ತದೆ. ಇಂತಹ ಪ್ರಮುಖ ವಿನ್ಯಾಸವುಳ್ಳ ರೂಪಕ ಅಲಂಕಾರಗಳು ಸತ್ಯವೇದದ ಭಾಷೆಯಲ್ಲಿ ವಿವರಿಸಲಾಗಿದೆ, ಅವುಗಳನ್ನು ಮತ್ತು ಇದು ನಿಮ್ಮನ್ನು ಕರೆದೊಯ್ಯುವ ಪುಟಗಳನ್ನು ದಯವಿಟ್ಟು ನೋಡಿರಿ ಸತ್ಯವೇದದಲ್ಲಿನ ಅಲಂಕಾರಗಳು ಸಾಮಾನ್ಯ ವಿನ್ಯಾಸಗಳು.

ನಿಷ್ಕ್ರಿಯ ಅಲಂಕಾರಗಳನ್ನು ಇನ್ನೊಂದು ಭಾಷೆಗೆ ಭಾಷಾಂತರಿಸುವಾಗ ಅದನ್ನು ರೂಪಕ ಎಂದು ಪರಿಗಣಿಸಬಾರದು. ಅದರ ಬದಲು ಉದ್ದಿಷ್ಟ ಭಾಷೆಯಲ್ಲಿ ಆ ವಿಷಯಕ್ಕೆ ಅಥವಾ ಪರಿಕಲ್ಪನೆಗೆ ಯಾವ ಅತ್ಯುತ್ತಮ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯವೋ ಅದನ್ನು ಬಳಸಿ.

ಸಕ್ರಿಯ ರೂಪಕ ಅಲಂಕಾರಗಳು

ಇಂತಹ ರೂಪಕ ಅಲಂಕಾರಗಳು ಒಂದು ಪರಿಕಲ್ಪನೆಗೆ ಬದಲಾಗಿ ಇನ್ನೊಂದು ಪರಿಕಲ್ಪನೆಯನ್ನು ಅಥವಾ ಒಂದು ವಸ್ತುವಿಗೆ ಬದಲಾಗಿ ಇನ್ನೊಂದು ವಸ್ತುವನ್ನು ಸೂಚಿಸುತ್ತದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ಇವುಗಳು ಒಂದು ವಸ್ತು ಇನ್ನೊಂದರಂತೆ ಇರಲು ಹೇಗೆ ಸಾಧ್ಯ ಎಂದು ಜನರು ಯೋಚಿಸುವಂತೆ ಮಾಡುತ್ತದೆ, ಏಕೆಂದರೆ ಅನೇಕ ಸಲ ಈ ಎರಡೂ ವಸ್ತುಗಳು ಭಿನ್ನವಾಗಿರುತ್ತದೆ. ಈ ರೂಪಕ ಅಲಂಕಾರಗಳು ಸಂದೇಶಕ್ಕೆ ಹೆಚ್ಚು ಬಲ ನೀಡುತ್ತದೆ ಮತ್ತು ಸಂದೇಶದಲ್ಲಿ ಅಸಾಧಾರಣ ಗುಣಲಕ್ಷಣಗಳನ್ನು ನೀಡುತ್ತವೆ ಎಂದು ಜನರು ಸುಲಭವಾಗಿ ಗುರುತಿಸುತ್ತಾರೆ. ಈ ಕಾರಣದಿಂದಲೇ ಜನರು ಈ ರೂಪಕ ಅಲಂಕಾರಗಳ ಕಡೆ ಗಮನಹರಿಸುತ್ತಾರೆ. ಉದಾಹರಣೆಗೆ,

ನನ್ನ ನಾಮದಲ್ಲಿ ಭಯಭಕ್ತಿ ಇಟ್ಟಿರುವ ನಿಮಗೋ ಧರ್ಮವೆಂಬ ನೀತಿಸೂರ್ಯನು ತನ್ನ ಕಿರಣಗಳುಳ್ಳ ರೆಕ್ಕೆಯಿಂದ ಸ್ವಸ್ಥತೆಯನ್ನು ಉಂಟುಮಾಡುವನು. (ಮಲಾಕಿ 4:2 ULT)

ಇಲ್ಲಿ ದೇವರು ಆತನ ರಕ್ಷಣೆಯ ಬಗ್ಗೆ ಮಾತನಾಡುವಾಗ ಸೂರ್ಯನು ತನ್ನ ಕಿರಣಗಳನ್ನು ಆತನು ಪ್ರೀತಿಸುವ ಜನರ ಮೇಲೆ ಹೊಳೆಯುವಂತೆ ಮಾಡಲು ಉದಯಿಸುತ್ತಾನೋ ಎಂಬಂತೆ ಮಾತನಾಡುತ್ತಾನೆ. ಆತನು ಸೂರ್ಯನ ಕಿರಣಗಳನ್ನು ರೆಕ್ಕೆಗಳೋ ಎಂಬಂತೆ ಮಾತನಾಡುತ್ತಿದ್ದಾನೆ, ಈ ರೆಕ್ಕೆಗಳು ಆತನ ಜನರನ್ನು ಗುಣಪಡಿಸುವ ಔಷಧಿಯನ್ನು ತರುತ್ತಿವೆಯೋ ಎಂಬಂತೆ ಹೇಳುತ್ತಿದ್ದಾನೆ. ಇಲ್ಲಿ ಇನ್ನೊಂದು ಉದಾಹರಣೆ ಇದೆ:

"ಹೋಗಿ ಆ ನರಿಗೆ ಹೇಳಿರಿ" ಎಂದು ಯೇಸು ಹೇಳಿದನು. (ಲೂಕ 13:32 ULT)

ಇಲ್ಲಿ, "ಆ ನರಿ" ಎಂಬುದು ಹೇರೋದನನ್ನು ಸೂಚಿಸುತ್ತಿದೆ. ಯೇಸುವಿನ ಮಾತನ್ನು ಆಲಿಸುತ್ತಿದ್ದ ಜನರು ಖಂಡಿತವಾಗಿಯೂ ಹೇರೋದನಲ್ಲಿ ನರಿಯಂತಹ ಗುಣಲಕ್ಷಣಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಬಯಸಿದನು ಎಂದು ಅರ್ಥಮಾಡಿಕೊಂಡರು. ಇದನ್ನು ಕೇಳಿದ ಜನರು ಹೇರೋದನು ನಾಶಮಾಡುವವನು, ಕೊಲೆಗಡುಕನು ಅಥವಾ ಅವನಿಗೆ ಸೇರದ ವಸ್ತುಗಳನ್ನು, ಆಸ್ತಿಯನ್ನು ಮೋಸದಿಂದ ಕಬಳಿಸುವವನು ಅಥವಾ ಈ ಎಲ್ಲಾ ಗುಣಗಳನ್ನು ಹೊಂದಿರುವ ದುಷ್ಟನಾದ ವ್ಯಕ್ತಿ ಎಂದು ಹೇಳಲು ಯೇಸು ಉದ್ದೇಶಿಸಿದನು ಎಂದು ಅವರು ಅರ್ಥಮಾಡಿಕೊಂಡರು.

ಸಕ್ರಿಯ ರೂಪಕ ಅಲಂಕಾರಗಳನ್ನು ಬಹು ಎಚ್ಚರಿಕೆಯಿಂದ ಸರಿಯಾಗಿ ಭಾಷಾಂತರ ಮಾಡಬೇಕು. ಹಾಗೆ ಮಾಡುವುದಕ್ಕೆ ನಾವು ರೂಪಕ ಅಲಂಕಾರದ ಭಾಗಗಳನ್ನು, ಅವು ಹೇಗೆ ಒಟ್ಟಾಗಿ ಅರ್ಥಪೂರ್ಣವಾಗಿ ಕಾರ್ಯಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು.

"ನಾನೇ ಜೀವ ಕೊಡುವ ರೊಟ್ಟಿ, ನನ್ನ ಬಳಿ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ" ಎಂದು ಯೇಸು ಅವರಿಗೆ ಹೇಳಿದನು. (ಯೋಹಾನ 6:35 ULT)

ಈ ರೂಪಕ ಅಲಂಕಾರದಲ್ಲಿ ಯೇಸು ತನ್ನನ್ನು ಜೀವ ಕೊಡುವ ರೊಟ್ಟಿ ಎಂದು ಹೇಳಿದ್ದಾನೆ. ಇಲ್ಲಿ "ನಾನು" ಎಂಬುದು ಉಪಮೇಯ ಮತ್ತು "ರೊಟ್ಟಿ" ಎಂಬುದು ಉಪಮಾನ. ರೊಟ್ಟಿ ಎಂಬುದು ಆಗಿನ ಕಾಲದ ಮತ್ತು ಆ ಸ್ಥಳದ ಜನರ ಪ್ರಮುಖ ಆಹಾರವಾಗಿತ್ತು. ಇಲ್ಲಿ ರೊಟ್ಟಿ ಮತ್ತು ಯೇಸುವಿನ ನಡುವೆ ಇರುವ ಸಾಮ್ಯತೆ ಏನೆಂದರೆ ಜನರಿಗೆ ಬದುಕಲು ಇವೆರಡು ಅವಶ್ಯವಾಗಿವೆ ಎಂಬುದೇ. ಶಾರೀರಿಕವಾದ ಜೀವನವನ್ನು ಹೊಂದಲು ಹೇಗೆ ರೊಟ್ಟಿಯನ್ನು ಜನರು ತಿನ್ನುವುದರ ಅ‍ವಶ್ಯಕತೆಯಿದೆಯೋ ಹಾಗೆಯೇ ನಿತ್ಯ ಜೀವವನ್ನು ಹೊಂದಲು ಯೇಸುವನ್ನು ನಂಬಬೇಕು. ಈ ರೂಪಕ ಆಲಂಕಾರದ ಗುಣವು "ಜೀವ" ಆಗಿದೆ. ಈ ಸಂಗತಿಯಲ್ಲಿ ಯೇಸು ರೂಪಕ ಆಲಂಕಾರದ ಮುಖ್ಯ ಗುಣವನ್ನು ತಿಳಿಸಿದನು, ಆದರೆ ಅನೇಕಸಾರಿ ಗುಣವನ್ನು ಸೂಚಿಸಲಾಗುತ್ತದೆ.

ರೂಪಕ ಅಲಂಕಾರಗಳ ಉದ್ದೇಶಗಳು

  • ಜನರಿಗೆ ತಿಳಿಯದ ವಿಷಯವನ್ನು (ಉಪಮೇಯ), ಈಗಾಗಲೇ ಅವರಿಗೆ ತಿಳಿದಿರುವ ವಿಷಯದ ಮೂಲಕ (ಉಪಮಾನ) ಬೋಧಿಸುವುದು ರೂಪಕ ಅಲಂಕಾರದ ಒಂದು ಉದ್ದೇಶವಾಗಿದೆ.
  • ಒಂದು ವಿಷಯದಲ್ಲಿ (ಉಪಮೇಯ) ವಿಶೇಷವಾದ ಗುಣಲಕ್ಷಣ (ಗುಣ) ಎತ್ತಿ ತೋರಿಸುವುದು ಅಥವಾ ಅದರಲ್ಲಿ ತೀವ್ರವಾದ ರೀತಿಯಲ್ಲಿ ಗುಣಲಕ್ಷಣಗಳಿವೆ ಎಂದು ತೋರಿಸುವುದು ಇನ್ನೊಂದು ಉದ್ದೇಶವಾಗಿದೆ.
  • ಜನರು ಉಪಮಾನದ ಬಗ್ಗೆ ಹೇಗೆ ಭಾವಿಸುತ್ತಾರೋ ಹಾಗೆಯೇ ಉಪಮೇಯ* ಬಗ್ಗೆಯೂ ಭಾವಿಸುವುದಕ್ಕಾಗಿ ಜನರನ್ನು ಮುನ್ನಡೆಸುವುದು ಇನ್ನೊಂದು ಉದ್ದೇಶವಾಗಿದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  • ಕೆಲವೊಮ್ಮೆ ಜನರು ರೂಪಕ ಅಲಂಕಾರವೆಂಬುದನ್ನು ಗುರುತಿಸಲು ಸಮರ್ಥರಾಗಿರುವುದಿಲ್ಲ. ಅವರು ರೂಪಕ ಅಲಂಕಾರದ ವಾಕ್ಯವನ್ನು ವಾಚ್ಯಾರ್ಥದ ವಾಕ್ಯದಂತೆ ತಿಳಿದುಕೊಳ್ಳುವುದರಿಂದ ನಿಜವಾದ ಅರ್ಥವನ್ನು ಅಪಾರ್ಥ ಮಾಡಿಕೊಳ್ಳುವರು.
  • ಜನರಿಗೆ ಉಪಮಾನವಾಗಿ ಬಳಸಿರುವ ವಸ್ತುವಿನ ಬಗ್ಗೆ ಗೊತ್ತಿಲ್ಲದಿರುವುದರಿಂದ ರೂಪಕ ಅಲಂಕಾರವನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ.
  • ಉಪಮೇಯವನ್ನು ತಿಳಿಸದಿದ್ದರೆ ಉಪಮೇಯ ಏನೆಂಬುದು ಜನರಿಗೆ ತಿಳಿಯುವುದಿಲ್ಲ.
  • ಮಾತನಾಡುವವನು ಜನರು ಅರ್ಥಮಾಡಿಕೊಳ್ಳಬೇಕೆಂದು ಬಯಸುವ ಹೋಲಿಕೆಯ ಅಂಶಗಳನ್ನು ಜನರು ಅರ್ಥಮಾಡಿಕೊಳ್ಳದಿರಬಹುದು. ಅವರು ಹೋಲಿಕೆಯ ಅಂಶಗಳ ಬಗ್ಗೆ ಯೋಚಿಸದಿದ್ದರೆ ಅವರು ರೂಪಕ ಅಲಂಕಾರವನ್ನು ಅರ್ಥಮಾಡಿಕೊಳ್ಳಲಾರರು.
  • ಜನರು ತಾವು ರೂಪಕ ಅಲಂಕಾರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು ಎಂದು ಭಾವಿಸುತ್ತಾರೆ ಆದರೆ ಅದು ಅವರಿಗೆ ಅರ್ಥವಾಗಿರುವುದಿಲ್ಲ. ಇಂತಹ ಸನ್ನಿವೇಶ ಅವರು ಸತ್ಯವೇದದ ಸಾಂಸ್ಕೃತಿಕ ಹಿನ್ನಲೆಯಲ್ಲಿ ಹೋಲಿಕೆಗಳನ್ನು ಬಳಸದೆ ತಮ್ಮ ಸಾಂಸ್ಕೃತಿಕ ಹಿನ್ನಲೆಯಲ್ಲಿ ಬಳಸಿದಾಗ ಉಂಟಾಗಬಹುದು.

ಭಾಷಾಂತರದ ತತ್ವಗಳು

  • ಮೂಲ ಭಾಷೆಯ ಶ್ರೋತೃಗಳಿಗೆ ಹೇಗೆ ತಿಳಿಸಿದ್ದಾರೋ ಅದೇ ರೀತಿ ಉದ್ದಿಷ್ಟ ಭಾಷೆಯ ಶ್ರೋತೃಗಳಿಗೂ ಅರ್ಥವಾಗುವಂತೆ ರೂಪಕ ಅಲಂಕಾರಗಳ ಅರ್ಥ ಸ್ಪಷ್ಟವಾಗಿ ತಿಳಿಸಿರಿ.
  • ರೂಪಕ ಅಲಂಕಾರದ ಅರ್ಥವು ಮೂಲ ಭಾಷೆಯ ಶ್ರೋತೃಗಳಿಗೆ ತಿಳಿಸಿದಂತೆ ಉದ್ದಿಷ್ಟ ಭಾಷೆಯ ಜನರಿಗೆ ತಿಳಿಸಬೇಕೇ ಹೊರತು ತೀರಾ ಸ್ಪಷ್ಟವಾಗಿ ತಿಳಿಸಬಾರದು.

ಸತ್ಯವೇದದಲ್ಲಿನ ಉದಾಹರಣೆಗಳು

ಭಾಷಾನಿನ ಆಕಳುಗಳಾದ ನೀವು, ಈ ಮಾತಿಗೆ ಕಿವಿಗೊಡಿರಿ (ಅಮೋಸ 4:1 ULT)

ಈ ರೂಪಕ ಅಲಂಕಾರದ ಮೂಲಕ ಆಮೋಸನು ಸಮಾರ್ಯದ ಉನ್ನತ ವರ್ಗದ ಮಹಿಳೆಯರನ್ನು ಕುರಿತು ಮಾತನಾಡುವಾಗ ("ನೀವು" ಎಂಬುದು ಉಪಮೇಯ) ಅವರು ಆಕಳು ಎಂಬಂತೆ ಮಾತನಾಡುತ್ತಾನೆ (ಉಪಮಾನ). ಆಮೋಸನು ಇಲ್ಲಿ ಮಹಿಳೆಯರು ಮತ್ತು ಆಕಳುಗಳ ನಡುವೆ ಯಾವ ಸಾಮ್ಯತೆ ಇದೆ ಎಂಬುದನ್ನು ಹೇಳುತ್ತಿಲ್ಲ. ಶ್ರೋತೃಗಳು ತಾವೇ ಅದರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ತಮ್ಮ ಸಾಂಸ್ಕೃತಿಕ ಹಿನ್ನೆಲೆಯ ಜ್ಞಾನದಿಂದ ಸುಲಭವಾಗಿ ತಿಳಿದು ಕೊಳ್ಳುವರು ಎಂದು ನಿರೀಕ್ಷಿಸುತ್ತಾನೆ. ಈ ವಿಷಯ ಸಂದರ್ಭದ ಮೂಲಕ ಆಮೋಸನು ಆಕಳು ಮತ್ತು ಮಹಿಳೆಯರು ಇಬ್ಬರೂ ಒಂದೇ ಗುಣವುಳ್ಳವರು, ಇಬ್ಬರೂ ದಪ್ಪ ಇದ್ದಾರೆ ಮತ್ತು ಹೆಚ್ಚು ಹೆಚ್ಚು ತಿನ್ನಲು ಆಸಕ್ತಿ ಉಳ್ಳವರು ಎಂದು ಹೇಳಿದ್ದಾನೆ. ಇದರಲ್ಲಿ ನಾವು ಸಾಂಸ್ಕೃತಿಕ ಹೋಲಿಕೆಯ ಅಂಶಗಳನ್ನು ನೋಡಿದರೆ ಹಸುಗಳನ್ನು ಪವಿತ್ರವಾದುವು ಎಂದು ಪೂಜಿಸುವರಿಗೆ ಇಂತಹ ಸಂದರ್ಭದಲ್ಲಿ ಆಮೋಸನ ಹೋಲಿಕೆ ತಪ್ಪಾಗಬಹುದು.

ಗಮನಿಸಿರಿ: ಆಮೋಸನು ನಿಜವಾಗಿಯೂ ಮಹಿಳೆಯರನ್ನು ಆಕಳುಗಳು ಎಂದು ಹೇಳಿಲ್ಲ. ಅವನು ಅವರನ್ನು ಮನುಷ್ಯರಂತೆ ಗುರುತಿಸಿ ಮಾತನಾಡುತ್ತಿದ್ದಾನೆ.

ಈಗಲಾದರೋ ಯೆಹೋವನೇ ನೀನು ನಮ್ಮ ತಂದೆಯಾಗಿದ್ದೀ ನಾವು ಜೇಡಿಮಣ್ಣು, ನೀನು ನಮ್ಮ ಕುಂಬಾರನು, ನಾವೆಲ್ಲರೂ ನಿನ್ನ ಕೈಕೆಲಸವೇ. (ಯೆಶಾಯ 64:8 ULT)

ಮೇಲಿನ ಉದಾಹರಣೆಯಲ್ಲಿ ಸಂಬಂಧಿತ ಎರಡು ರೂಪಕ ಅಲಂಕಾರಗಳಿವೆ. ಇಲ್ಲಿ "ನಾವು" ಮತ್ತು "ನೀನು" ಎಂಬುದು ಉಪಮೇಯಗಳು ಮತ್ತು "ಜೇಡಿಮಣ್ಣು" ಹಾಗೂ "ಕುಂಬಾರ" ಎಂಬುದು ಉಪಮಾನಗಳು ಆಗಿವೆ. ಇಲ್ಲಿ ಕುಂಬಾರನಿಗೂ ಮತ್ತು ದೇವರಿಗೂ ನಡುವೆಯಿರುವ ಸಾಮ್ಯತೆ ಎಂದರೆ ಇಬ್ಬರೂ ತಮ್ಮ ಸಾಮಾಗ್ರಿಗಳಿಂದ ತಾವು ಉದ್ದೇಶಿಸಿದ್ದನ್ನು ಉಂಟುಮಾಡುತ್ತಾರೆ. ಕುಂಬಾರನು ಜೇಡಿಮಣ್ಣಿನಿಂದ ತಾನು ಬಯಸಿದ ರೀತಿಯಲ್ಲಿ ಮಾಡುತ್ತಾನೆ, ದೇವರು ತನ್ನ ಜನರಿಂದ ತಾನು ಬಯಸಿದಂತೆ ಮಾಡುತ್ತಾನೆ. ಇಲ್ಲಿ ಕುಂಬಾರನ ಜೇಡಿಮಣ್ಣು ಮತ್ತು ನಾವು ಎಂಬುದರ ನಡುವಿನ ಹೋಲಿಕೆಯ ಅಂಶಗಳನ್ನು ಜೇಡಿಮಣ್ಣಾಗಲೀ ಅಥವಾ ನಾವು ಯಾವ ರೀತಿ ಸೃಷ್ಟಿಯಾದರೂ ಅದನ್ನು ಪ್ರಶ್ನಿಸುವ ಅಧಿಕಾರವಾಗಲೀ ಅಥವಾ ಹಕ್ಕಾಗಲೀ ನಮಗೆ ಇರುವುದಿಲ್ಲ ಎಂಬ ವಿಚಾರವನ್ನು ವ್ಯಕ್ತಪಡಿಸಲಾಗಿದೆ.

ಯೇಸು ಅವರಿಗೆ "ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ" ಎಂದು ಹೇಳಿದನು. ಅದಕ್ಕೆ ಶಿಷ್ಯರು, "ನಾವು ರೊಟ್ಟಿಬುತ್ತಿಗಳನ್ನು ಕಟ್ಟಿಕೊಳ್ಳದೇ ಬಂದೆವಲ್ಲಾ" ಅದಕ್ಕೆ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. (ಮತ್ತಾಯ 16:6-7 ULT)

ಯೇಸು ಇಲ್ಲಿ ರೂಪಕ ಅಲಂಕಾರವನ್ನು ಬಳಸಿದನು, ಆದರೆ ಆತನ ಶಿಷ್ಯರು ಅದನ್ನು ಅರ್ಥಮಾಡಿಕೊಳ್ಳಲಿಲ್ಲ. ಇಲ್ಲಿ ಯೇಸು "ಹುಳಿಹಿಟ್ಟು" ಎಂದು ಹೇಳಿದಾಗ ಆತನು ರೊಟ್ಟಿಯ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಅವರು ಭಾವಿಸಿದರು, ಆದರೆ ಈ ರೂಪಕ ಆಲಂಕಾರದಲ್ಲಿ "ಹುಳಿಹಿಟ್ಟು" ಎಂಬುದು ಉಪಮಾನವಾಗಿತ್ತು, ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯು ಉಪಮೇಯವಾಗಿತ್ತು. ಇಲ್ಲಿ ಆತನ ಶಿಷ್ಯರು (ಮೂಲ ಶ್ರೋತೃಗಳು) ಯೇಸು ಯಾವ ಉದ್ದೇಶದಿಂದ ಇದನ್ನು ಹೇಳಿದ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಹೋದುದರಿಂದ ಇಲ್ಲಿ ಅದನ್ನು ತೀರಾ ಸ್ಪಷ್ಟವಾಗಿ ಹೇಳುವುದು ಸರಿಯಲ್ಲ.

ಭಾಷಾಂತರದ ಕಾರ್ಯತಂತ್ರಗಳು

ಮೂಲ ಓದುಗರು ರೂಪ ಅಲಂಕಾರವನ್ನು ಸರಿಯಾಗಿ ಅರ್ಥಮಾಡಿಕೊಂಡ ಪ್ರಕಾರವೇ ಜನರು ಅದನ್ನು ಅರ್ಥಮಾಡಿಕೊಳ್ಳುವುದಾದರೆ ಅದನ್ನು ಹಾಗೆಯೇ ಬಳಕೆ ಮಾಡಿರಿ. ನೀವು ಭಾಷಾಂತರ ಮಾಡಿದ ಮೇಲೆ ನಿಮ್ಮ ಜನರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.

ಹಾಗೆ ಓದುಗರು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕೆಳಗೆ ಕೊಟ್ಟಿರುವ ಕಾರ್ಯತಂತ್ರಗಳನ್ನು ಬಳಸಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು.

  1. ಮೂಲ ಭಾಷೆಯಲ್ಲಿ ರೂಪಕ ಅಲಂಕಾರವು ಸಾಮಾನ್ಯರೀತಿಯಲ್ಲಿ ಅಭಿವ್ಯಕ್ತವಾದರೆ ಅಥವಾ ಸತ್ಯವೇದದ ಭಾಷೆಯಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ವ್ಯಕ್ತಪಡಿಸಿದರೆ (ನಿಷ್ಕ್ರಿಯ ರೂಪಕ ಅಲಂಕಾರ), ಆಗ ಗುಣವನ್ನು ನಿಮ್ಮ ಭಾಷೆಯಲ್ಲಿ ಸರಳವಾದ ರೀತಿಯಲ್ಲಿ ವ್ಯಕ್ತಪಡಿಸಬಹುದು.
  2. ರೂಪಕ ಅಲಂಕಾರವು ಸಕ್ರಿಯ ರೂಪಕವಾಗಿದ್ದರೆ, ಸತ್ಯವೇದದಲ್ಲಿರುವ ಅದೇ ಅರ್ಥವನ್ನು ಕೊಡುವ ರೀತಿಯಲ್ಲಿ ಉದ್ದಿಷ್ಟ ಭಾಷೆಯಲ್ಲೂ ರೂಪಕ ಅಲಂಕಾರವನ್ನು ಬಳಸಲಾಗಿದೆ ಎಂದು ನೀವು ಭಾವಿಸುವುದಾದರೆ ನೀವು ಅದನ್ನು ಯಥಾವತ್ತಾಗಿ ಭಾಷಾಂತರಿಸಬಹುದು. ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.
  3. ಉದ್ದಿಷ್ಟ ಭಾಷೆಯ ಶ್ರೋತೃವು ಅದು ರೂಪಕ ಅಲಂಕಾರವಾಗಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ ಆಗ ಅದನ್ನು ಉಪಮಾ ಅಲಂಕಾರವನ್ನಾಗಿ ಬದಲಾಯಿಸಿ. ಕೆಲವು ಭಾಷೆಯಲ್ಲಿ ಇಂತಹ ವಾಕ್ಯಗಳಿಗೆ "ಅಂತೆ" ಅಥವಾ "ಹಾಗೆ" ಎಂಬ ಪದಗಳನ್ನು ಬಳಸಿ ವಾಕ್ಯಮಾಡುತ್ತಾರೆ. ನೋಡಿರಿ ಉಪಮಾಲಂಕಾರ.
  4. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮಾನದ ಬಗ್ಗೆ ತಿಳಿಯದಿದ್ದರೆ ಆ ಗುಣವನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿಷಯಗಳನ್ನು ತಿಳಿಯಲು. ಇದನ್ನು ನೋಡಿರಿ ಗೊತ್ತಿಲ್ಲದುದರ ಭಾಷಾಂತರ
  5. ಉದ್ದಿಷ್ಟ ಭಾಷೆಯ ಶ್ರೋತೃಗಳು ಆ ಅರ್ಥಕ್ಕಾಗಿ ಆ ಉಪಮಾನವನ್ನು ಬಳಸದಿರುವುದಾದರೆ ನಿಮ್ಮ ಸಂಸ್ಕೃತಿಯಲ್ಲಿ ಬಳಸುವ ಉಪಮಾನವನ್ನು ಬಳಸಿಕೊಳ್ಳಿರಿ. ಆದರೆ ಇಂತಹ ಉಪಮಾನವು ಸತ್ಯವೇದದ ಕಾಲದಲ್ಲಿ ಬಳಕೆಯಾದ ವಿಷಯಗಳಾಗಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
  6. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯದ ಬಗೆ ತಿಳಿಯದೆ ಇದ್ದರೆ ನೀವು ಉಪಮೇಯವನ್ನು ಸ್ಪಷ್ಟವಾಗಿ ತಿಳಿಸಿರಿ. (ಆದರೆ ಮೂಲ ಭಾಷೆಯ ಶ್ರೋತೃಗಳಿಗೆ ಉಪಮೇಯ ಬಗ್ಗೆ ತಿಳಿಯದೆ ಇದ್ದರೆ ಹೀಗೆ ಮಾಡಬೇಡಿ)
  7. ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯ ಮತ್ತು ಉಪಮಾನದ ನಡುವೆಯಿರುವ ಸಾಮ್ಯತೆಯು (ಗುಣ) ತಿಳಿಯದಿರುವುದಾದರೆ ಆಗ ಸ್ಪಷ್ಟವಾಗಿ ತಿಳಿಸುವುದು ಅಗತ್ಯವಾಗಿರುತ್ತದೆ.
  8. ಈ ಎಲ್ಲಾ ಕಾರ್ಯತಂತ್ರಗಳು ತೃಪ್ತಿಕರವಾಗದಿದ್ದರೆ ಗುಣವನ್ನು ರೂಪಕಗಳನ್ನು ಬಳಸದೆ ಸರಳವಾಗಿ ವಾಕ್ಯದಲ್ಲಿ ತಿಳಿಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಮೂಲ ಭಾಷೆಯಲ್ಲಿ ರೂಪಕ ಅಲಂಕಾರವು ಸಾಮಾನ್ಯರೀತಿಯಲ್ಲಿ ಅಭಿವ್ಯಕ್ತವಾದರೆ ಅಥವಾ ಸತ್ಯವೇದದ ಭಾಷೆಯಲ್ಲಿ ವಿನ್ಯಾಸಿತ ಜೋಡಿ ಪರಿಕಲ್ಪನೆಗಳನ್ನು ವ್ಯಕ್ತಪಡಿಸಿದರೆ (ನಿಷ್ಕ್ರಿಯ ರೂಪಕ ಅಲಂಕಾರ), ಆಗ ಗುಣವನ್ನು ನಿಮ್ಮ ಭಾಷೆಯಲ್ಲಿ ಸರಳವಾದ ರೀತಿಯಲ್ಲಿ ವ್ಯಕ್ತಪಡಿಸಬಹುದು.

ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು. (ಮಾರ್ಕ 5:22 ULT)

ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬುವವನು ಬಂದು ಆತನನ್ನು ಕಂಡಾಗ, ಆತನ ಮುಂದೆ ತಲೆಬಾಗಿ ನಮಸ್ಕರಿಸಿದನು.

(2) ರೂಪಕ ಅಲಂಕಾರವು ಸಕ್ರಿಯ ರೂಪಕವಾಗಿದ್ದರೆ, ಸತ್ಯವೇದದಲ್ಲಿರುವ ಅದೇ ಅರ್ಥವನ್ನು ಕೊಡುವ ರೀತಿಯಲ್ಲಿ ಉದ್ದಿಷ್ಟ ಭಾಷೆಯಲ್ಲೂ ರೂಪಕ ಅಲಂಕಾರವನ್ನು ಬಳಸಲಾಗಿದೆ ಎಂದು ನೀವು ಭಾವಿಸುವುದಾದರೆ ನೀವು ಅದನ್ನು ಯಥಾವತ್ತಾಗಿ ಭಾಷಾಂತರಿಸಬಹುದು. ನೀವು ಈ ರೀತಿ ಮಾಡಿದರೆ ನಿಮ್ಮ ಭಾಷಾ ಸಮುದಾಯದವರು ಇದನ್ನು ಸರಿಯಾಗಿ ಅರ್ಥಮಾಡಿ ಕೊಳ್ಳುತ್ತಾರೆಯೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.

ನಿಮ್ಮ ಕಠಿಣ ಹೃದಯಗಳ ನಿಮಿತ್ತ ಅವನು ನಿಮಗೆ ಇಂತಹ ಆಜ್ಞೆ ಬರೆದನು (ಮಾರ್ಕ 10:5 ULT)

ನಿಮ್ಮ ಕಠಿಣ ಹೃದಯಗಳ ನಿಮಿತ್ತ ಅವನು ನಿಮಗೆ ಇಂತಹ ಆಜ್ಞೆ ಬರೆದನು.

ಇದರಲ್ಲಿ ಯಾವ ಬದಲಾವಣೆಯನ್ನು ಮಾಡಿಲ್ಲ, ಆದರೆ ಉದ್ದಿಷ್ಟ ಭಾಷೆಯ ಶ್ರೋತೃಗಳು ಈ ರೂಪಕವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವರು ಎಂದು ಪರೀಕ್ಷಿಸಿ ತಿಳಿದುಕೊಳ್ಳಬೇಕು.

(3) ಉದ್ದಿಷ್ಟ ಭಾಷೆಯ ಶ್ರೋತೃವು ಅದು ರೂಪಕ ಅಲಂಕಾರವಾಗಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ ಆಗ ಅದನ್ನು ಉಪಮಾ ಅಲಂಕಾರವನ್ನಾಗಿ ಬದಲಾಯಿಸಿ. ಕೆಲವು ಭಾಷೆಯಲ್ಲಿ ಇಂತಹ ವಾಕ್ಯಗಳಿಗೆ "ಅಂತೆ" ಅಥವಾ "ಹಾಗೆ" ಎಂಬ ಪದಗಳನ್ನು ಬಳಸಿ ವಾಕ್ಯಮಾಡುತ್ತಾರೆ.

ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ, ನಾವು ಜೇಡಿಮಣ್ಣು ನೀನು ನಮ್ಮ* ಕುಂಬಾರನು*; ಮತ್ತು ನಾವು ನಿನ್ನ ಕೈ ಕೆಲಸವೆ (ಯೆಶಾಯ 64:8 ULT)

ಯೆಹೋವನೇ, ನೀನು ನಮ್ಮ ತಂದೆ; ನಾವು ಜೇಡಿಮಣ್ಣಿನ ಹಾಗೆ ಇದ್ದೇವೆ. ನೀನು ಕುಂಬಾರ ಹಾಗೆ ಇದ್ದಿ; ನಾವೆಲ್ಲರೂ ನಿನ್ನ ಕೈ ಕೆಲಸವೆ.

(4) ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮಾನದ ಬಗ್ಗೆ ತಿಳಿಯದಿದ್ದರೆ ಆ ಗುಣವನ್ನು ಹೇಗೆ ಭಾಷಾಂತರಿಸಬೇಕು ಎಂಬ ವಿಷಯಗಳನ್ನು ತಿಳಿಯಲು ಇದನ್ನು ನೋಡಿರಿ ಗೊತ್ತಿಲ್ಲದುದರ ಭಾಷಾಂತರ

ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸಿಸುತ್ತೀ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟವಾಗುತ್ತದೆ. (ಅ.ಕೃ. 26:14 ULT)

ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮೊನಚಾದ ಕೋಲನ್ನು ಒದೆಯುವುದು ನಿನಗೆ ತುಂಬಾ ಕಷ್ಟವಾಗುತ್ತದೆ.

(5) ಉದ್ದಿಷ್ಟ ಭಾಷೆಯ ಶ್ರೋತೃಗಳು ಆ ಅರ್ಥಕ್ಕಾಗಿ ಆ ಉಪಮಾನವನ್ನು ಬಳಸದಿರುವುದಾದರೆ ನಿಮ್ಮ ಸಂಸ್ಕೃತಿಯಲ್ಲಿ ಬಳಸುವ ಉಪಮಾನವನ್ನು ಬಳಸಿಕೊಳ್ಳಿರಿ. ಆದರೆ ಇಂತಹ ಉಪಮಾನವು ಸತ್ಯವೇದದ ಕಾಲದಲ್ಲಿ ಬಳಕೆಯಾದ ವಿಷಯಗಳಾಗಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಿರಿ.

ಈಗಲಾದರೋ ಯೆಹೋವನೇ , ನೀನು ನಮ್ಮ ತಂದೆಯಾಗಿದ್ದಿ ನಾವು ಜೇಡಿಮಣ್ಣು ನೀನು ನಮ್ಮ ಕುಂಬಾರನು; ಮತ್ತು ನಾವು ನಿನ್ನ ಕೈ ಕೆಲಸವೆ** (ಯೆಶಾಯ 64:8 ULT)

"ಯೆಹೋವನೇ, ನೀನೇ ನಮ್ಮ ತಂದೆ, ನಾವು ಮರ. ನೀನೇ ನಮ್ಮ ಕೆತ್ತನೆಗಾರ ನಾವು ನಿನ್ನ ಕೈಕೆಲಸ." "ಯೆಹೋವನೇ, ನೀನೇ ನಮ್ಮ ತಂದೆ, ನಾವು ದಾರದ ಎಳೆ. ನೀನೇ ನಮ್ಮ ನೇಕಾರ; ನಾವೆಲ್ಲರೂ ನಿನ್ನ ಕೈಕೆಲಸ.

(6) ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯದ ಬಗೆ ತಿಳಿಯದೆ ಇದ್ದರೆ ನೀವು ಉಪಮೇಯವನ್ನು ಸ್ಪಷ್ಟವಾಗಿ ತಿಳಿಸಿರಿ. (ಆದರೆ ಮೂಲ ಭಾಷೆಯ ಶ್ರೋತೃಗಳಿಗೆ ಉಪಮೇಯ ಬಗ್ಗೆ ತಿಳಿಯದೆ ಇದ್ದರೆ ಹೀಗೆ ಮಾಡಬೇಡಿ)

ಯೆಹೋವನು ಜೀವಸ್ವರೂಪನು; ನನ್ನ ಬಂಡೆಯೇ ನಿನಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. (ಕೀರ್ತನೆ. 18:46 ULT)

ಯೆಹೋವನು ಜೀವಸ್ವರೂಪನು; ಆತನು ನನ್ನ ಬಂಡೆಯು. ಆತನಿಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ.

(7) ಉದ್ದಿಷ್ಟ ಭಾಷೆಯ ಶ್ರೋತೃಗಳಿಗೆ ಉಪಮೇಯ ಮತ್ತು ಉಪಮಾನದ ನಡುವೆಯಿರುವ ಸಾಮ್ಯತೆಯು ತಿಳಿಯದಿರುವುದಾದರೆ ಆಗ ಸ್ಪಷ್ಟವಾಗಿ ತಿಳಿಸುವುದು ಅಗತ್ಯವಾಗಿರುತ್ತದೆ.

ಯೆಹೋವನು ಜೀವಸ್ವರೂಪನು; ನನ್ನ ಬಂಡೆಯೇ ನಿನಗೆ ಸ್ತೋತ್ರವಾಗಲಿ. ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. (ಕೀರ್ತನೆ. 18:46 ULT)

ಯೆಹೋವನು ಜೀವಸ್ವರೂಪನು; ಆತನು ನಾನು ನನ್ನ ಶತ್ರುಗಳಿಂದ ಮರೆಯಾಗಿರುವಂತೆ ಅಡಗಿಕೊಳ್ಳುವ ಬಂಡೆಯಾಗಿರುವುದ್ದರಿಂದ ಆತನು ಸ್ತುತಿಸಲ್ಪಡಲಿ. ನನ್ನನ್ನು ರಕ್ಷಿಸುವ ದೇವರಿಗೆ, ಕೊಂಡಾಟವಾಗಲಿ.

ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸಿಸುತ್ತೀ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟವಾಗುತ್ತದೆ. (ಅ.ಕೃ. 26:14 ULT)

ಸೌಲನೇ , ಸೌಲನೇ , ನನ್ನನ್ನು ಏಕೆ ಹಿಂಸಿಸುತ್ತೀ? ನೀನು ಎತ್ತು ಹೇಗೆ ಮಾಲೀಕನ ಮೊನಚಾದ ಕೋಲಿಗೆ ಒದು ಗಾಯಮಾಡಿಕೊಳ್ಳುತ್ತದೋ ಹಾಗೆ ನೀನು ನನ್ನ ವಿರುದ್ಧ ಹೋರಾಡಿ ಗಾಯಗೊಳ್ಳುವಿ.

(8) ಈ ಎಲ್ಲಾ ಕಾರ್ಯತಂತ್ರಗಳು ತೃಪ್ತಿಕರವಾಗದಿದ್ದರೆ ಗುಣವನ್ನು ರೂಪಕಗಳನ್ನು ಬಳಸದೆ ಸರಳವಾಗಿ ವಾಕ್ಯದಲ್ಲಿ ತಿಳಿಸಿರಿ.

ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು (ಮಾರ್ಕ 1:17 ULT)

ನಾನು ನಿಮ್ಮನ್ನು ಜನರನ್ನು ಒಂದುಗೂಡಿಸುವ ಜನರನ್ನಾಗಿ ಮಾಡುತ್ತೇನೆ. ಈಗ ನೀವು ಮೀನುಗಳನ್ನು ಹಿಡಿದು ಒಟ್ಟುಗೂಡಿಸುತ್ತಿದ್ದಿರಿ. ನಾನು ನಿಮ್ಮನ್ನು ಜನರನ್ನು ಒಟ್ಟುಗೂಡಿಸುವವರನ್ನಾಗಿ ಮಾಡುವೆನು.

ನಿರ್ದಿಷ್ಟವಾದ ರೂಪಕ ಅಲಂಕಾರಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸತ್ಯವೇದದ ಅಲಂಕಾರದ ಸಾಮಾನ್ಯ ರಚನೆಗಳು ಇದನ್ನು ನೋಡಿರಿ.