kn_ta/translate/figs-hyperbole/01.md

23 KiB

ವಿವರಣೆ

ಮಾತನಾಡುವವನು ಅಥವಾ ಬರಹಗಾರನು ತಾನು ಸಂಪೂರ್ಣವಾಗಿ ನಿಜವಾದ, ಅಥವಾ ಸಾಮಾನ್ಯವಾಗಿ ನಿಜವಾದ ಅಥವಾ ಅತಿಶಯೋಕ್ತಿಯಾಗಿರುವ ಎಂದು ಉದ್ದೇಶಿಸುವಂಥದ್ದನ್ನು ಹೇಳಲು ನಿರ್ದಿಷ್ಟವಾಗಿ ಅದೇ ರೀತಿಯಿರುವ ಪದಗಳನ್ನು ಬಳಸಬಹುದು. ಇದರಿಂದಲೇ ಇದನ್ನು ಅರ್ಥಮಾಡಿಕೊಳ್ಳಲು ಬೇಕಾದ ಪದವನ್ನು ನಿರ್ಧರಿಸುವುದು ಕಷ್ಟವಾಗಬಹುದು. ಉದಾಹರಣೆಗೆ, ಕೆಳಗಿರುವ ವಾಕ್ಯವನ್ನು ಮೂರು ರೀತಿಯ ಅರ್ಥ ಕೊಡಬಹುದು.

  • ಇಲ್ಲಿ ಪ್ರತಿ ರಾತ್ರಿ ಮಳೆ ಬರುತ್ತದೆ.
  1. ಮಾತನಾಡುವವನು ಇಲ್ಲಿ ಪ್ರತಿ ರಾತ್ರಿ ಮಳೆ ಬರುತ್ತದೆ ಎಂಬುದನ್ನು ಉದ್ದೇಶಿಸುವಾಗ ಅದು ಅಕ್ಷರಶಃವಾಗಿ ನಿಜವಾಗಿದೆ ಎಂಬುದು ಅವನು ಹೇಳುತ್ತಿರುವುದರ ಅರ್ಥವಾಗಿದೆ.
  2. ಮಾತನಾಡುವವನು ಇಲ್ಲಿ ಪ್ರತಿ ರಾತ್ರಿ ಮಳೆ ಬರುತ್ತದೆ ಎಂಬುದನ್ನು ಉದ್ದೇಶಿಸುವಾಗ ಅದು ಸಾಮಾನ್ಯೀಕರಣ ಆಗಿದೆ ಎಂಬುದು ಅವನು ಹೇಳುತ್ತಿರುವುದರ ಅರ್ಥವಾಗಿದೆ.
  3. ಮಳೆಯ ಹೆಚ್ಚಿನ ಪ್ರಮಾಣದ ಕಡೆಗೆ ಸಾಮಾನ್ಯವಾಗಿ ಬಲವಾದ ಭಾವನೆಗಳಾದ ಕಿರಿಕಿರಿಯನ್ನು ಅಥವಾ ಅತಿಯಾದ ಸಂತೋಷವನ್ನು ವ್ಯಕ್ತಪಡಿಸುವುದಕ್ಕಾಗಿ ಸಹಜವಾಗಿ ಬರುವ ಮಳೆಗಿಂತ ಹೆಚ್ಚಾಗಿ ಮಳೆ ಬರುತ್ತಿದೆ ಎಂದು ಹೇಳಲು ಮಾತನಾಡುವವನು ಅತಿಶಯೋಕ್ತಿ ಆಗಿ ಅದನ್ನು ಹೇಳಿರಬಹುದು.

** ಅತಿಶಯೋಕ್ತಿ**: ಇದು ಉತ್ಪ್ರೇಕ್ಷೆ ಯನ್ನು ತಿಳಿಸಲು ಬಳಸುವ ಅಲಂಕಾರವಾಗಿದೆ. ಕೆಲವೊಮ್ಮೆ ಮಾತನಾಡುವವನು ವಿಷಯದ ಬಗ್ಗೆ ಇರುವ ತನ್ನ ಕಡುವಾದ ಭಾವನೆ ಅಥವಾ ಅಭಿಪ್ರಾಯಗಳನ್ನು ತೋರಿಸಲು ಉದ್ದೇಶಪೂರ್ವಕವಾಗಿ ಅತಿಶಯೋಕ್ತಿ ಅಥವಾ ನಿಜವಲ್ಲದ ವಿಷಯವನ್ನು ವಿವರಿಸುತ್ತಾನೆ. ಅವನು ಹೇಳುವ ಉತ್ಪ್ರೇಕ್ಷಿತ ವಿಷಯಗಳನ್ನು ಜನರು ಅರ್ಥಮಾಡಿಕೊಳ್ಳಬೇಕೆಂದು ನಿರೀಕ್ಷಿಸುತ್ತಾನೆ.

ಅವರು ಕಲ್ಲಿನ ಮೇಲೆ ಕಲ್ಲು ಇರುವುದಕ್ಕೆ ಬಿಡುವುದಿಲ್ಲ (ಲೂಕ 19:44 ULT)

  • ಇದೊಂದು ಉತ್ಪ್ರೇಕ್ಷೆ. ಇದರ ಅರ್ಥ ಶತ್ರುಗಳು ಯೆರೂಸಲೇಮನ್ನು ಸಂಪೂರ್ಣವಾಗಿ ನಾಶಮಾಡುವರು.

ಮೋಶೆಯು ಐಗುಪ್ತದವರ ಸರ್ವ ವಿದ್ಯೆಗಳಲ್ಲಿ ಶಿಕ್ಷಿತನಾದನು (ಅಪೊ.ಕೃತ್ಯ. 7:22 ULT)

  • ಈ ಅತಿಶಯೋಕ್ತಿ ಅರ್ಥವೇನಂದರೆ ಅವನು ಐಗುಪ್ತದವರಿಗೆ ತಿಳಿದಿರುವ ಮತ್ತು ಅವರು ಕಲಿಸುವ ಬಹುತೇಕ ಎಲ್ಲವನ್ನು ಕಲಿತುಕೊಂಡನು, ಆದ್ದರಿಂದ ಒಬ್ಬ ಐಗುಪ್ತದವನಂತೆಯೇ ಶಿಕ್ಷಿತನಾದನು.

** ಸಾಮಾನ್ಯೀಕರಣ:** ಈ ಹೇಳಿಕೆಯು ಅನ್ವಯವಾಗುವಂಥ ಬಹುತೇಕ ಸಮಯದಲ್ಲಿ ಅಥವಾ ಬಹುತೇಕ ಪರಿಸ್ಥಿತಿಗಳಲ್ಲಿ ನಿಜವಾಗಿರುತ್ತದೆ.

ಶಿಕ್ಷೆಯನ್ನು ನಿರ್ಲಕ್ಷಿಸುವವನಿಗೆ ಬಡತನ ಮತ್ತು ಅವಮಾನ ಆಗುತ್ತದೆ, ಆದರೆ ತಿದ್ದುವಿಕೆಯಿಂದ ಕಲಿತುಕೊಳ್ಳುವವನಿಗೆ ಮಾನವು ಬರುತ್ತದೆ. (ಜ್ಞಾನೋಕ್ತಿಗಳು 13:18)

  • ಶಿಕ್ಷೆಯನ್ನು ನಿರ್ಲಕ್ಷಿಸುವ ಜನರಿಗೆ ಸಾಮಾನ್ಯವಾಗಿ ಏನಾಗುತ್ತದೆ ಮತ್ತು ತಿದ್ದುವಿಕೆಯಿಂದ ಕಲಿತುಕೊಳ್ಳುವ ಜನರಿಗೆ ಏನಾಗುತ್ತದೆ ಎಂಬುದನ್ನು ಈ ಸಾಮಾನ್ಯೀಕರಣದ ಹೇಳಿಕೆಗಳು ಹೇಳುತ್ತವೆ. ಈ ಹೇಳಿಕೆಗಳಿಗೆ ಕೆಲವು ಆಕ್ಷೇಪಣೆಗಳು ಇರಬಹುದು, ಆದರೆ ಸಾಮಾನ್ಯವಾಗಿ ಅವು ನಿಜವಾಗಿವೆ.

ಆದರೆ ನೀವು ಪ್ರಾರ್ಥನೆಮಾಡುವಾಗ ಅನ್ಯಜನಗಳ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡಿ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ. (ಮತ್ತಾಯ 6:7)

  • ಸಾಮಾನ್ಯೀಕರಣ ಹೇಳಿಕೆಯು ಅನ್ಯಜನರು ಯಾವುದಕ್ಕೆ ಹೆಸರುವಾಸಿಯಾಗಿದ್ದರು ಎಂಬುದನ್ನು ಹೇಳುತ್ತದೆ. ಅನೇಕ ಅನ್ಯಜನರು ಇದನ್ನು ಮಾಡುತ್ತಿದ್ದರು. ಸ್ಪಲ್ಪ ಜನರು ಅದನ್ನು ಮಾಡದೆ ಹೋದರೂ ಅದು ಪ್ರಾಮುಖ್ಯವೇನು ಅಲ್ಲ. ಶ್ರೋತೃಗಳು ಹೆಸರುವಾಸಿಯಾಗಿರುವ ಈ ಆಚರಣೆಯಲ್ಲಿ ಪಾಲುಗಾರರಾಗಬಾರದು ಎಂಬುದು ಇದರಲ್ಲಿನ ವಿಷಯವಾಗಿದೆ.

"ಎಲ್ಲ," "ಯಾವಾಗಲೂ," "ಯಾವುದೂ ಇಲ್ಲ," ಅಥವಾ "ಎಂದಿಗೂ ಇಲ್ಲ" ಎಂಬ ಬಲಪ್ರಯೋಗ ಇರುವ ಪದಗಳು ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣ ಹೇಳಿಕೆಗಳಲ್ಲಿ ಇದ್ದರೂ, ಇದು ನಿರ್ದಿಷ್ಟವಾಗಿ "ಎಲ್ಲಾ," "ಯಾವಾಗಲೂ," "ಯಾವುದೂ ಇಲ್ಲ," ಅಥವಾ "ಎಂದಿಗೂ ಇಲ್ಲ" ಎಂಬ ಅರ್ಥವನ್ನು ಕೊಡುತ್ತವೆ ಎಂದರ್ಥವಲ್ಲ. ಇದು ಸರಳವಾಗಿ "ಬಹುತೇಕ," "ಬಹುತೇಕ ಸಮಯ," "ಕನಿಷ್ಟ ಯಾವುದಾದರೂ" ಅಥವಾ "ವಿರಳವಾಗಿ" ಎಂಬ ಅರ್ಥ ನೀಡುತ್ತದೆ.

ಕಾರಣವೇನಂದರೆ ಇದು ಭಾಷಾಂತರದ ಸಮಸ್ಯೆಯಾಗಿದೆ

  1. ಓದುಗರು ಹೇಳಿಕೆಯು ಅಕ್ಷರಶಃವಾಗಿ ನಿಜವೋ, ಅಲ್ಲವೋ ಎಂದು ಅರ್ಥಮಾಡಿಕೊಳ್ಳಲು ಶಕ್ತರಾಗಿರಬೇಕು.
  2. ಓದುಗರು ಹೇಳಿಕೆಯು ಅಕ್ಷರಶಃವಾಗಿ ನಿಜವಲ್ಲ ಎಂದು ತಿಳಿದುಕೊಂಡರೆ ಈ ಹೇಳಿಕೆಯು ಅತಿಶಯೋಕ್ತಿಯೇ, ಸಾಮಾನ್ಯೀಕರಣ ವಾಕ್ಯವೇ ಅಥವಾ ಅಸತ್ಯವೇ ಎಂದು ಅರ್ಥಮಾಡಿಕೊಳ್ಳಲು ಶಕ್ತರಾಗಿರಬೇಕು. (ಸತ್ಯವೇದವು ಸಂಪೂರ್ಣವಾಗಿ ನಿಜವೇ ಆಗಿದ್ದರೂ, ಸತ್ಯವೇದವು ಯಾವಾಗಲೂ ಸತ್ಯವನ್ನು ಹೇಳದ ಜನರ ಬಗ್ಗೆ ಹೇಳುತ್ತದೆ.)

ಸತ್ಯವೇದದಲ್ಲಿನ ಉದಾಹರಣೆಗಳು

ಅತಿಶಯೋಕ್ತಿಯ ಉದಾಹರಣೆಗಳು

ಇದಲ್ಲದೆ ನಿನ್ನ ಕೈ ಪಾಪ ಮಾಡಲು ನಿನಗೆ ಕಾರಣವಾದರೆ, ಅದನ್ನು ಕತ್ತರಿಸಿಬಿಡು. ಅಂಗಹೀನನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಉತ್ತಮ… (ಮಾರ್ಕ 9:43 ULT)

ಯೇಸು ಕೈಯನ್ನು ಕತ್ತರಿಸಿಬಿಡು ಎಂದು ಹೇಳುವಾಗ ಆತನು ಉದ್ದೇಶಿಸಿದ್ದೇನಂದರೆ ನಾವು ಪಾಪ ಮಾಡದೇ ಇರುವುದಕ್ಕಾಗಿ ಏನೆಲ್ಲಾ ತೀವ್ರವಾದ ಕಾರ್ಯವನ್ನು ಮಾಡಬೇಕೋ ಅದನ್ನು ಮಾಡಿರಿ. ಪಾಪ ಮಾಡುವುದನ್ನು ನಿಲ್ಲಿಸಲು ಪ್ರಯತ್ನಿಸುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ತಿಳಿಸುವುದಕ್ಕಾಗಿ ಆತನು ಅತಿಶಯೋಕ್ತಿಯನ್ನು ಬಳಸಿದನು.

ಆಗ ಫಿಲಿಷ್ಟಿಯರು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೋಸ್ಕರ ಕೂಡಿಬಂದರು: ಮೂವತ್ತು ಸಾವಿರ ರಥಗಳನ್ನು, ರಥಗಳನ್ನು ಓಡಿಸಲು ಆರು ಸಾವಿರ ಜನರನ್ನು ಮತ್ತು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತ ಕಾಲ್ಬಲವನ್ನೂ ತೆಗೆದುಕೊಂಡು ಬಂದರು. (1 ಸಮುವೇಲ 13:5 ULT)

ಗುರುತು ಮಾಡಿರುವ ನುಡಿಗಟ್ಟು, ಫಿಲಿಪ್ಪಿಯರ ಸೈನ್ಯವು ಸಂಖ್ಯೆಯಲ್ಲಿ ಅಸಂ‍ಖ್ಯಾತವಾಗಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಉದ್ದೇಶಕ್ಕಾಗಿ ಬಳಸಿರುವ ಉತ್ಪ್ರೇಕ್ಷೆಯಾಗಿದೆ. ಫಿಲಿಪ್ಪಿಯರ ಸೈನ್ಯದಲ್ಲಿ ಅನೇಕಾನೇಕ ಸೈನಿಕರು ಇದ್ದರು ಎಂಬುದು ಇದರರ್ಥವಾಗಿದೆ.

ಆದರೆ ಆತನ ಅಭಿಷೇಕವು ಎಲ್ಲ ವಿಷಯಗಳ ಬಗ್ಗೆ ನಿಮಗೆ ಬೋಧಿಸಿದಂತೆಯೇ ಅದು ನಿಜವಾಗಿದೆ, ಅದು ಸುಳ್ಳಲ್ಲ, ಮತ್ತು ಅದು ನಿಮಗೆ ಬೋಧಿಸಿದ ಪ್ರಕಾರವೇ ಆತನಲ್ಲಿ ನೆಲೆಗೊಳ್ಳಿರಿ. (1 ಯೋಹಾನ 2:27 ULT)

ಇದು ಅತಿಶಯೋಕ್ತಿಯಾಗಿದೆ. ನಾವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳ ಬಗ್ಗೆ ದೇವರ ಆತ್ಮನು ನಮಗೆ ಬೋಧಿಸುತ್ತಾನೆ ಎಂಬ ಭರವಸೆಯನ್ನು ಇದು ವ್ಯಕ್ತಪಡಿಸುತ್ತದೆ. ತಿಳಿದುಕೊಳ್ಳಲು ಸಾಧ್ಯವಿರುವ ಎಲ್ಲದರ ಬಗ್ಗೆ ದೇವರ ಆತ್ಮನು ನಮಗೆ ಬೋಧಿಸುವುದಿಲ್ಲ.

ಅವರು ಆತನನ್ನು ಕಂಡುಕೊಂಡು ಅತನಿಗೆ, “ಎಲ್ಲರೂ ನಿನ್ನನ್ನು ಹುಡುಕುತ್ತಿದ್ದಾರೆ” ಎಂದು ಹೇಳಿದರು. (ಮಾರ್ಕ 1:37 ULT)

ಪಟ್ಟಣದಲ್ಲಿರುವ ಪ್ರತಿಯೊಬ್ಬರೂ ಯೇಸುವನ್ನು ಹುಡುಕುತ್ತಿದ್ದಾರೆಂಬದು ಬಹುಶಃ ಶಿಷ್ಯರ ಮಾತಿನ ಅರ್ಥವಲ್ಲ, ಆದರೆ ಅನೇಕ ಜನರು ಆತನನ್ನು ಹುಡುಕುತ್ತಿದ್ದಾರೆ, ಅಥವಾ ಅಲ್ಲಿ ಯೇಸುವಿಗೆ ಅಪ್ತರಾಗಿದ್ದ ಸ್ನೇಹಿತರೆಲ್ಲರೂ ಆತನನ್ನು ಹುಡುಕುತ್ತಿದ್ದಾರೆಂಬ ಅರ್ಥವಾಗಿರಬಹುದು. ಇದು ಅವರು ಮತ್ತು ಇತರರು ಆತನ ಬಗ್ಗೆ ಚಿಂತಿತರಾಗಿದ್ದಾರೆ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಬಳಸಿರುವ ಉತ್ಪ್ರೇಕ್ಷೆಯಾಗಿದೆ.

ಸಾಮಾನ್ಯೀಕರಣದ ಉದಾಹರಣೆಗಳು

ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ? (ಯೋಹಾನ 1:46 ULT)

ಈ ಭಾವೋತ್ತೇಜಕ ಪ್ರಶ್ನೆಯು ನಜರೇತಿನಲ್ಲಿ ಒಳ್ಳೆಯದು ಯಾವುದೂ ಇಲ್ಲ ಎಂಬ ಸಾಮಾನ್ಯೀಕರಣವನ್ನು ವ್ಯಕ್ತಪಡಿಸುವ ಉದ್ದೇಶವುಳ್ಳದ್ದಾಗಿದೆ. ಅಲ್ಲಿನ ಜನರು ಅಶಿಕ್ಷಿತರು ಮತ್ತು ಕಟ್ಟುನಿಟ್ಟಾಗಿ ಧರ್ಮವನ್ನು ಪಾಲಿಸುವವರಲ್ಲ ಎಂಬ ಅಪಖ್ಯಾತಿ ಉಳ್ಳವರಾಗಿದ್ದರು. ಖಂಡಿತವಾಗಿ, ಇದಕ್ಕೆ ಆಕ್ಷೇಪಣೆಗಳು ಇದ್ದವು.

ಕ್ರೇತದವರು ಯಾವಾಗಲೂ ಸುಳ್ಳುಗಾರರೂ, ದುಷ್ಟ ಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರಲ್ಲಿ ಒಬ್ಬನಾದ ಅವರ ಸ್ವಂತ ಪ್ರವಾದಿಯೇ ಹೇಳಿದ್ದಾನೆ. (ತೀತ 1:12 ULT)

ಇದು ಸಾಮಾನ್ಯೀಕರಣವಾಗಿದೆ, ಇದರರ್ಥ ಕ್ರೇತದವರಿಗೆ ಈ ರೀತಿಯಾದ ಅಪಖ್ಯಾತಿ ಇತ್ತು, ಏಕೆಂದರೆ ಸಾಮಾನ್ಯವಾಗಿ ಕ್ರೇತದವರು ಈ ರೀತಿಯಾಗಿ ವರ್ತಿಸುತ್ತಿದ್ದರು. ಇದಕ್ಕೂ ಆಕ್ಷೇಪಣೆಗಳು ಇರುವ ಸಾ‍ಧ್ಯತೆಯಿದೆ.

ಸೋಮಾರಿತನದ ಕೈ ಬಡತನವನ್ನು ಉಂಟುಮಾಡುತ್ತದೆ, ಆದರೆ ಚುರುಕುಗೈ ಅವನನ್ನು ಶ್ರೀಮಂತನನ್ನಾಗಿ ಮಾಡುತ್ತದೆ. (ಜ್ಞಾನೋಕ್ತಿ 10:4 ULT)

ಇದು ಸಾಮಾನ್ಯವಾಗಿ ನಿಜವಾದ ಸಂಗತಿ, ಮತ್ತು ಬಹುತೇಕ ಜನರ ಅನುಭವವನ್ನು ತೋರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಆಕ್ಷೇಪಣೆಗಳಿರುವ ಸಾಧ್ಯತೆಯಿದೆ.

ಎಚ್ಚರಿಕೆ

ಅಸಾಧ್ಯವೆಂದು ತೋರುವ ಕಾರಣ ಒಂದು ವಿಷಯವು ಉತ್ಪ್ರೇಕ್ಷೆಯಾಗಿದೆ ಎಂದು ಊಹಿಸಿಕೊಳ್ಳಬೇಕಾಗಿಲ್ಲ. ದೇವರು ಅದ್ಭುತಕಾರ್ಯಗಳನ್ನು ಮಾಡುತ್ತಾನೆ.

…ಯೇಸು ಸಮುದ್ರದ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವುದನ್ನು ಅವರು ನೋಡಿದರು… (ಯೊಹಾನ 6:19 ULT)

ಇದು ಅತಿಶಯೋಕ್ತಿಯಲ್ಲ. ಯೇಸು ನಿಜವಾಗಲೂ ಸಮುದ್ರದ ನೀರಿನ ಮೇಲೆ ನಡೆದು ಬಂದನು. ಇದು ಅಕ್ಷರಶಃ ನಿಜವಾದ ಹೇಳಿಕೆ.

"ಎಲ್ಲಾ" ಎಂಬ ಪದ ಯಾವಾಗಲೂ ಸಾಮಾನ್ಯೀಕರಣದ ಪದವಾಗಿದ್ದು "ಬಹುತೇಕ" ಎಂಬ ಅರ್ಥಕೊಡುತ್ತದೆ ಎಂದು ಊಹಿಸಿಕೊಳ್ಳಬೇಡಿರಿ.

ಯೆಹೋವನ ತನ್ನ ಎಲ್ಲಾ ಮಾರ್ಗಗಳಲ್ಲಿ ನೀತಿಯುಳ್ಳವನು; ಆತನು ಮಾಡುವ ಎಲ್ಲಾ ಕಾರ್ಯಗಳಲ್ಲಿ ಕೃಪೆಯುಳ್ಳವನು. (ಕೀರ್ತನೆ. 145:17 ULT)

ಯೆಹೋವನು ಯಾವಾಗಲೂ ನೀತಿಯುಳ್ಳವನು. ಇದು ಸಂಪೂರ್ಣವಾಗಿ ನಿಜವಾದ ಹೇಳಿಕೆಯಾಗಿದೆ.

ಭಾಷಾಂತರದ ಕಾರ್ಯತಂತ್ರಗಳು

ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣದ ಹೇಳಿಕೆಗಳು ಸಹಜವಾಗಿದ್ದು, ಜನರಿಗೆ ಅರ್ಥವಾಗಲು ಸುಲಭವಾಗಿದ್ದರೆ ಮತ್ತು ಅದು ಸುಳ್ಳು ಎಂದು ಜನರು ಅಂದುಕೊಳ್ಳದಿದ್ದರೆ ಅದನ್ನೇ ಬಳಸಲು ಪರಿಗಣಿಸಿರಿ. ಇಲ್ಲದಿದ್ದರೆ, ಇಲ್ಲಿ ಕೆಲವು ಆಯ್ಕೆಗಳಿವೆ ಗಮನಿಸಿ.

  1. ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಅರ್ಥವನ್ನು ವ್ಯಕ್ತಪಡಿಸಿರಿ.
  2. ಸಾಮಾನ್ಯೀಕರಣದ ವಿಷಯದಲ್ಲಿ, "ಸಾಮಾನ್ಯವಾಗಿ" ಅಥವಾ "ಹೆಚ್ಚಿನ ಪ್ರಕರಣಗಳಲ್ಲಿ" ಎಂಬಂಥ ಪದಗಳನ್ನು ಬಳಸಿ ಸಾಮಾನ್ಯೀಕರಣವನ್ನು ತೋರಿಸಿಕೊಡಿರಿ.
  3. ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣ ಅಷ್ಟೊಂದು ಖಚಿತವಾಗಿ ಇರುವುದಿಲ್ಲ ಎಂಬುದನ್ನು ತೋರಿಸಲು "ಅನೇಕ" ಅಥವಾ "ಬಹುತೇಕ" ಎಂಬ ಪದಗಳನ್ನು ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣಕ್ಕೆ ಸೇರಿಸಿರಿ.
  4. ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣದಲ್ಲಿರುವ "ಎಲ್ಲಾ", "ಯಾವಾಗಲೂ," "ಯಾವುದೂ ಇಲ್ಲ," ಅಥವಾ "ಎಂದಿಗೂ ಇಲ್ಲ," ಎಂಬ ಪದಗಳು ತೆಗೆದುಹಾಕಲು ಪರಿಗಣಿಸಿರಿ.

ಭಾಷಾಂತರದ ಕಾರ್ಯತಂತ್ರಗಳನ್ನು ಅನ್ವಯಿಸಲಾಗಿರುವ ಉದಾಹರಣೆಗಳು

(1) ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಅರ್ಥವನ್ನು ವ್ಯಕ್ತಪಡಿಸಿರಿ.

ಆಗ ಫಿಲಿಷ್ಟಿಯರು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೋಸ್ಕರ ಕೂಡಿಬಂದರು: ಮೂವತ್ತು ಸಾವಿರ ರಥಗಳನ್ನು, ರಥಗಳನ್ನು ಓಡಿಸಲು ಆರು ಸಾವಿರ ಜನರನ್ನು ಮತ್ತು ಸಮುದ್ರ ತೀರದ ಮರಳಿನಷ್ಟು ಅಸಂಖ್ಯಾತ ಕಾಲ್ಬಲವನ್ನೂ ತೆಗೆದುಕೊಂಡು ಬಂದರು. (1 ಸಮುವೇಲ 13:5 ULT)

ಆಗ ಫಿಲಿಷ್ಟಿಯರು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೋಸ್ಕರ ಕೂಡಿಬಂದರು: ಮೂವತ್ತು ಸಾವಿರ ರಥಗಳನ್ನು, ರಥಗಳನ್ನು ಓಡಿಸಲು ಆರು ಸಾವಿರ ಜನರನ್ನು ಮತ್ತು ಬಹು ಸಂಖ್ಯೆಯಲ್ಲಿ ಕಾಲ್ಬಲವನ್ನೂ ತೆಗೆದುಕೊಂಡು ಬಂದರು.

(2) ಸಾಮಾನ್ಯೀಕರಣದ ವಿಷಯದಲ್ಲಿ, "ಸಾಮಾನ್ಯವಾಗಿ" ಅಥವಾ "ಹೆಚ್ಚಿನ ಪ್ರಕರಣಗಳಲ್ಲಿ" ಎಂಬಂಥ ಪದಗಳನ್ನು ಬಳಸಿ ಸಾಮಾನ್ಯೀಕರಣವನ್ನು ತೋರಿಸಿಕೊಡಿರಿ.

ಶಿಕ್ಷೆಯನ್ನು ನಿರ್ಲಕ್ಷಿಸುವವನಿಗೆ ಬಡತನ ಮತ್ತು ಅವಮಾನ ಆಗುತ್ತದೆ… (ಜ್ಞಾನೋಕ್ತಿಗಳು 13:18 ULT)

ಸಾಮಾನ್ಯವಾಗಿ, ಶಿಕ್ಷೆಯನ್ನು ನಿರ್ಲಕ್ಷಿಸುವವನಿಗೆ ಬಡತನ ಮತ್ತು ಅವಮಾನ ಆಗುತ್ತದೆ.

ಆದರೆ ನೀವು ಪ್ರಾರ್ಥನೆಮಾಡುವಾಗ ಅನ್ಯಜನಗಳ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡಿ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ. (ಮತ್ತಾಯ 6:7)

ಆದರೆ ನೀವು ಪ್ರಾರ್ಥನೆಮಾಡುವಾಗ ಸಾಮಾನ್ಯವಾಗಿ ಅನ್ಯಜನಗಳು ಹೇಳುವ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡಿ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ.

(3) ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣ ಅಷ್ಟೊಂದು ಖಚಿತವಾಗಿ ಇರುವುದಿಲ್ಲ ಎಂಬುದನ್ನು ತೋರಿಸಲು "ಅನೇಕ" ಅಥವಾ "ಬಹುತೇಕ" ಎಂಬ ಪದಗಳನ್ನು ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣಕ್ಕೆ ಸೇರಿಸಿರಿ.

ಆಗ ಇಡೀ ಯೂದಾಯ ಸೀಮೆಯು ಮತ್ತು ಯೆರೂಸಲೇಮಿನ ಎಲ್ಲಾ ಜನರು ಆತನ ಬಳಿಗೆ ಹೋದರು. (ಮಾರ್ಕ 1:5 ULT)

ಬಹುತೇಕ ಎಲ್ಲ ಯೂದಾಯ ಸೀಮೆಯು ಮತ್ತು ಯೆರೂಸಲೇಮಿನ ಬಹುತೇಕ ಎಲ್ಲಾ ಜನರು ಆತನ ಬಳಿಗೆ ಹೋದರು." ಅಥವಾ: ಯೂದಾಯ ಸೀಮೆಯ ಅನೇಕರು ಮತ್ತು ಯೆರೂಸಲೇಮಿನ ಅನೇಕ ಜನರು ಆತನ ಬಳಿಗೆ ಹೋದರು."

(4) ಅತಿಶಯೋಕ್ತಿ ಅಥವಾ ಸಾಮಾನ್ಯೀಕರಣದಲ್ಲಿರುವ "ಎಲ್ಲಾ", "ಯಾವಾಗಲೂ," "ಯಾವುದೂ ಇಲ್ಲ," ಅಥವಾ "ಎಂದಿಗೂ ಇಲ್ಲ," ಎಂಬ ಪದಗಳು ತೆಗೆದುಹಾಕಲು ಪರಿಗಣಿಸಿರಿ.

ಆಗ ಇಡೀ ಯೂದಾಯ ಸೀಮೆಯು ಮತ್ತು ಯೆರೂಸಲೇಮಿನ ಎಲ್ಲಾ ಜನರು ಆತನ ಬಳಿಗೆ ಹೋದರು. (ಮಾರ್ಕ 1:5 ULT)

ಯೂದಾಯ ಸೀಮೆಯವರು ಮತ್ತು ಯೆರೂಸಲೇಮಿನ ಜನರು ಆತನ ಬಳಿಗೆ ಹೋದರು.