kn_obs/content/37.md

8.3 KiB

37. ಯೇಸು ಲಾಜರನನ್ನು ಸತ್ತವರೊಳಗಿಂದ ಎಬ್ಬಿಸಿದನು

OBS Image

ಲಾಜರನೆಂಬ ಒಬ್ಬ ಮನುಷ್ಯನಿದ್ದನು. ಅವನಿಗೆ ಮರಿಯ ಮತ್ತು ಮಾರ್ಥ ಎಂಬ ಇಬ್ಬರು ಸಹೋದರಿಯರು ಇದ್ದರು. ಅವರೆಲ್ಲರು ಯೇಸುವಿನ ಅ ಆಪ್ತ ಸ್ನೇಹಿತರಾಗಿದ್ದರು. ಒಂದು ದಿನ, ಲಾಜರನು ತುಂಬಾ ಅಸ್ವಸ್ಥನಾಗಿದ್ದಾನೆ ಎಂದು ಯಾರೊಬ್ಬರು ಯೇಸುವಿಗೆ ತಿಳಿಸಿದರು. ಯೇಸು ಅದನ್ನು ಕೇಳಿದಾಗ, "ಈ ರೋಗವು ಲಾಜರನ ಮರಣದೊಂದಿಗೆ ಅಂತ್ಯಗೊಳ್ಳುವುದಿಲ್ಲ, ಬದಲಿಗೆ ಇದು ಜನರು ದೇವರನ್ನು ಮಹಿಮೆಪಡಿಸುವಂತೆ ಮಾಡುತ್ತದೆ" ಎಂದು ಹೇಳಿದನು.

OBS Image

ಯೇಸು ತನ್ನ ಸ್ನೇಹಿತರನ್ನು ಪ್ರೀತಿಸಿದಾಗ್ಯೂ ಆತನು ತಾನಿದ್ದ ಸ್ಥಳದಲ್ಲೇ ಎರಡು ದಿನಗಳ ಕಾಲ ಕಾದಿದ್ದನು. ಆ ಎರಡು ದಿನಗಳಾದ ನಂತರ, ಆತನು ತನ್ನ ಶಿಷ್ಯರಿಗೆ, "ನಾವು ತಿರುಗಿ ಯೂದಾಯಕ್ಕೆ ಹೋಗೋಣ" ಎಂದು ಹೇಳಿದನು. ಆಗ ಶಿಷ್ಯರು "ಗುರುವೇ, ಸ್ವಲ್ಪ ದಿನಗಳ ಹಿಂದೆ ಅಲ್ಲಿನ ಜನರು ನಿಮ್ಮನ್ನು ಕೊಲ್ಲಬೇಕೆಂದು ಬಯಸಿದ್ದರು!" ಎಂದು ಉತ್ತರಿಸಿದರು. ಯೇಸು, "ನಮ್ಮ ಸ್ನೇಹಿತನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ, ನಾನು ಅವನನ್ನು ನಿದ್ರೆಯಿಂದ ಎಬ್ಬಿಸಬೇಕಾಗಿದೆ" ಎಂದು ಹೇಳಿದನು.

OBS Image

ಯೇಸುವಿನ ಶಿಷ್ಯರು, "ಗುರುವೇ, ಲಾಜರನು ನಿದ್ರೆ ಮಾಡುತ್ತಿದ್ದರೆ ಸ್ವಸ್ಥನಾಗುವನು" ಎಂದರು. ಆಗ ಯೇಸು ಅವರಿಗೆ, "ಲಾಜರನು ಸತ್ತು ಹೋದನು. ಮತ್ತು ನಾನು ಅಲ್ಲಿ ಇಲ್ಲದೆ ಇದ್ದದ್ದಕ್ಕೆ ಸಂತೋಷಪಡುತ್ತೇನೆ, ಯಾಕೆದರೆ ಅದರಿಂದ ನೀವು ನನ್ನನ್ನು ನಂಬುವದಕ್ಕೆ ಮಾರ್ಗವಾಯಿತು" ಎಂದು ಸ್ಪಷ್ಟವಾಗಿ ಹೇಳಿದನು.

OBS Image

ಯೇಸು ಲಾಜರನ ಊರಿಗೆ ಬಂದಾಗ ಲಾಜರನು ಸತ್ತುಹೋಗಿ ಆಗಲೇ ನಾಲ್ಕು ದಿನಗಳಾಗಿತ್ತು. ಮಾರ್ಥನು ಯೇಸುವನ್ನು ಎದುರುಗೊಳ್ಳುವುದಕ್ಕೆ ಹೋಗಿ, "ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ. ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ನಂಬುತ್ತೇನೆ" ಎಂದು ಹೇಳಿದಳು.

OBS Image

ಅದಕ್ಕೆ ಯೇಸು, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು. ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದನು. ಆಗ ಮಾರ್ಥಳು, "ಹೌದು ಕರ್ತನೇ, ದೇವಕುಮಾರನಾದ ಮೆಸ್ಸೀಯನು ನೀನೇ ಎಂದು ನಾನು ನಂಬಿದ್ದೇನೆ" ಎಂದು ಉತ್ತರಕೊಟ್ಟಳು.

OBS Image

ಆಗ ಮರಿಯಳು ಬಂದು ಯೇಸುವಿನ ಪಾದಕ್ಕೆ ಬಿದ್ದು, "ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ" ಎಂದು ಹೇಳಿದಳು. ಯೇಸು ಅವರಿಗೆ, "ನೀವು ಲಾಜರನನ್ನು ಎಲ್ಲಿ ಇಟ್ಟಿದ್ದೀರಿ?" ಎಂದು ಕೇಳಿದನು. ಅವರು ಆತನಿಗೆ, "ಸಮಾಧಿಯಲ್ಲಿಟ್ಟಿದ್ದೇವೆ ಬಂದು ನೋಡು" ಎಂದು ಹೇಳಿದರು. ಆಗ ಯೇಸು ಅತ್ತನು.

OBS Image

ಆ ಸಮಾಧಿಯು ಒಂದು ಗವಿಯಾಗಿತ್ತು ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. ಯೇಸು ಸಮಾಧಿಯ ಬಳಿಗೆ ಬಂದಾಗ ಆತನು ಅವರಿಗೆ, "ಕಲ್ಲನ್ನು ತೆಗೆಯಿರಿ" ಎಂದು ಹೇಳಿದನು. ಆದರೆ ಮಾರ್ಥಳು, "ಅವನು ಸತ್ತು ನಾಲ್ಕು ದಿನಗಳಾದವು. ದುರ್ವಾಸನೆ ಇರುತ್ತದೆ" ಎಂದು ಹೇಳಿದಳು.

OBS Image

ಯೇಸು, "ನೀನು ನನ್ನನ್ನು ನಂಬಿದರೆ ದೇವರ ಶಕ್ತಿಯನ್ನು ಕಾಣುವಿ ಎಂದು ನಾನು ನಿಮಗೆ ಹೇಳಲಿಲ್ಲವೋ?" ಎಂದನು. ಆದ್ದರಿಂದ ಅವರು ಕಲ್ಲನ್ನು ತೆಗೆದುಹಾಕಿದರು.

OBS Image

ಆಗ ಯೇಸು ಕಣ್ಣೆತ್ತಿ ಪರಲೋಕದ ಕಡೆಗೆ ನೋಡಿ, "ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಇಲ್ಲಿ ನಿಂತಿರುವ ಈ ಜನರೆಲ್ಲರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ" ಎಂದು ಹೇಳಿದನು. ಆಗ ಯೇಸು, "ಲಾಜರನೇ, ಹೊರಗೆ ಬಾ" ಎಂದು ಕೂಗಿದನು.

OBS Image

ಆದ್ದರಿಂದ ಲಾಜರನು ಹೊರಗೆ ಬಂದನು! ಅವನು ಇನ್ನೂ ಶವವಸ್ತ್ರದಿಂದ ಸುತ್ತಲ್ಪಟ್ಟವನಾಗಿದ್ದನು. ಯೇಸು ಅವರಿಗೆ, "ಆ ಶವವಸ್ತ್ರಗಳನ್ನು ಬಿಚ್ಚಿಹಾಕುವಂತೆ ಅವನಿಗೆ ಸಹಾಯ ಮಾಡಿ ಅವನನ್ನು ಬಿಡಿಸಿರಿ!" ಎಂದು ಹೇಳಿದನು. ಈ ಅದ್ಭುತದ ನಿಮಿತ್ತವಾಗಿ ಅನೇಕ ಮಂದಿ ಯೆಹೂದ್ಯರು ಯೇಸುವನ್ನು ನಂಬಿದ್ದರು.

OBS Image

ಆದರೆ ಯೆಹೂದ್ಯರ ಧಾರ್ಮಿಕ ಮುಖಂಡರು ಯೇಸುವನ್ನು ದ್ವೇಷಿಸಿದರು, ಅವರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲುವುದು ಹೇಗೆ ಎಂದು ಸಂಚು ರೂಪಿಸಲು ಒಟ್ಟಾಗಿ ಕೂಡಿಬಂದರು.

ಸತ್ಯವೇದದ ಕಥೆ: ಯೋಹಾನ 11:1-46