kn_obs/content/36.md

4.3 KiB

36. ರೂಪಾಂತರ

OBS Image

ಒಂದಾನೊಂದು ದಿನ, ಯೇಸು ತನ್ನ ಶಿಷ್ಯರಾದ ಪೇತ್ರ, ಯಾಕೋಬ, ಮತ್ತು ಯೋಹಾನರನ್ನು ತನ್ನೊಂದಿಗೆ ಕರೆದುಕೊಂಡು ಹೋದನು. (ಯೋಹಾನನೆಂಬ ಶಿಷ್ಯನು, ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ ವ್ಯಕ್ತಿಯಲ್ಲ.) ಅವರು ಪ್ರಾರ್ಥನೆ ಮಾಡುವುದಕ್ಕಾಗಿ ಎತ್ತರವಾದ ಬೆಟ್ಟಕ್ಕೆ ಹೋದರು.

OBS Image

ಯೇಸು ಪ್ರಾರ್ಥಿಸುತ್ತಿರುವಾಗ, ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು, ಭೂಲೋಕದಲ್ಲಿರುವ ಯಾವ ಅಗಸನಾದರೂ ಅಷ್ಟು ಬೆಳ್ಳಗೆ ಮಾಡಲಾಗದಷ್ಟು ಬೆಳ್ಳಗಾದವು.

OBS Image

ಆಗ ಮೋಶೆ ಮತ್ತು ಪ್ರವಾದಿಯಾದ ಎಲೀಯನು ಕಾಣಿಸಿಕೊಂಡರು. ಈ ಪುರುಷರು ಈ ಸಂಗತಿಗಿಂತ ನೂರಾರು ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವಿಸುತ್ತಿದ್ದರು. ಅವರು ಯೇಸುವಿನೊಂದಿಗೆ ಆತನ ಮರಣದ ಬಗ್ಗೆ ಮಾತನಾಡಿದರು, ಯಾಕೆಂದರೆ ಆತನು ಶೀಘ್ರದಲ್ಲಿಯೇ ಯೆರೂಸಲೇಮಿನಲ್ಲಿ ಸಾಯಲಿದ್ದನು.

OBS Image

ಮೋಶೆ ಮತ್ತು ಎಲೀಯನು ಯೇಸುವಿನೊಂದಿಗೆ ಮಾತನಾಡುತ್ತಿರುವಾಗ, ಪೇತ್ರನು ಯೇಸುವಿಗೆ, "ನಾವು ಇಲ್ಲೇ ಇರುವುದು ಒಳ್ಳೆಯದು. ಮೂರು ಗುಡಾರಗಳನ್ನು ಕಟ್ಟೋಣ ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು" ಎಂದು ಹೇಳಿದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂಬುದೇ ಅವನಿಗೆ ತಿಳಿಯಲಿಲ್ಲ.

OBS Image

ಪೇತ್ರನು ಮಾತನಾಡುತ್ತಿರುವಾಗ, ಪ್ರಕಾಶಮಾನವಾದ ಮೋಡವು ಬಂದು ಅವರ ಮೇಲೆ ಕವಿಯಿತು. ಆ ಮೋಡದೊಳಗಿನಿಂದ ಬಂದ ವಾಣಿಯನ್ನು ಅವರು ಕೇಳಿಸಿಕೊಂಡರು. ಅದು ಹೇಳಿದ್ದೇನಂದರೆ, “ಈತನು ನನ್ನ ಪ್ರಿಯ ಕುಮಾರನು. ಈತನನ್ನು ನಾನು ಮೆಚ್ಚಿಕೊಂಡಿದ್ದೇನೆ. ಈತನಿಗೆ ಕಿವಿಗೊಡಿರಿ.” ಈ ಮೂವರು ಶಿಷ್ಯರು ಬಹಳವಾಗಿ ಹೆದರಿ ಬೋರಲು ಬಿದ್ದರು.

OBS Image

ಆಗ ಯೇಸು ಅವರನ್ನು ಮುಟ್ಟಿ, "ಹೆದರಬೇಡಿರಿ ಏಳಿರಿ" ಎಂದು ಹೇಳಿದನು. ಅವರು ಸುತ್ತಲೂ ನೋಡಿದಾಗ, ಯೇಸು ಮಾತ್ರವೇ ಅಲ್ಲಿದ್ದನು.

OBS Image

ಯೇಸು ಮತ್ತು ಮೂವರು ಶಿಷ್ಯರು ಬೆಟ್ಟದಿಂದ ಇಳಿದು ಹೋದರು. ಆಗ ಯೇಸು ಅವರಿಗೆ, "ಇಲ್ಲಿ ಸಂಭವಿಸಿದ್ದರ ಬಗ್ಗೆ ಯಾರಿಗೂ ಏನೂ ಹೇಳಬೇಡಿರಿ. ನಾನು ಬೇಗನೇ ಸಾಯುತ್ತೇನೆ ಮತ್ತು ನಂತರ ಜೀವಿತನಾಗಿ ಎದ್ದುಬರುತ್ತೇನೆ. ಅದಾದನಂತರ ನೀವು ಜನರಿಗೆ ಈ ಸಂಗತಿಯನ್ನು ಜನರಿಗೆ ತಿಳಿಸಬಹುದು " ಎಂದು ಹೇಳಿದನು.

ಸತ್ಯವೇದದ ಕಥೆ: ಮತ್ತಾಯ 17:1-9; ಮಾರ್ಕ 9:2-8; ಲೂಕ 9:28-36