kn_obs/content/29.md

5.1 KiB
Raw Permalink Blame History

29. ಕರುಣೆಯಿಲ್ಲದ ಸೇವಕನ ಕಥೆ

OBS Image

ಒಂದು ದಿನ, ಪೇತ್ರನು ಯೇಸುವಿಗೆ, "ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?” ಎಂದು ಕೇಳಿದನು. ಯೇಸು, "ಏಳು ಸಾರಿ ಅಲ್ಲ ಏಳೆಪ್ಪತ್ತು ಸಾರಿ!" ಎಂದು ಹೇಳಿದನು. ಯೇಸು ಇದರ ಮೂಲಕ ನಾವು ಯಾವಾಗಲೂ ಕ್ಷಮಿಸಬೇಕೆಂದು ಸೂಚಿಸಿದನು. ಅನಂತರ ಯೇಸು ಈ ಕಥೆಯನ್ನು ಹೇಳಿದನು.

OBS Image

ಯೇಸು, “ದೇವರ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನ ಸೇವಕರಲ್ಲಿ ಒಬ್ಬನು 200,000 ವರ್ಷಗಳ ಸಂಬಳದಷ್ಟು ದೊಡ್ಡ ಸಾಲವನ್ನು ತೀರಿಸಬೇಕಾಯಿತು.

OBS Image

“ಆ ಸಾಲ ತೀರಿಸುವುದಕ್ಕೆ ಆ ಸೇವಕನಿಂದ ಆಗಲಿಲ್ಲ, ಆದ್ದರಿಂದ ಅರಸನು “ಈ ಮನುಷ್ಯನನ್ನೂ, ಅವನ ಹೆಂಡತಿ, ಮಕ್ಕಳನ್ನೂ ಮಾರಿ ಅದನ್ನು ತೀರಿಸಬೇಕು” ಎಂದು ಹೇಳಿದನು.

OBS Image

“ಆ ಸೇವಕನು ಅರಸನ ಮುಂದೆ ಮೊಣಕಾಲೂರಿ ಅವನಿಗೆ, ‘ದಯವಿಟ್ಟು ನನ್ನ ಮೇಲೆ ತಾಳ್ಮೆಯಿರಲಿ, ನಾನು ನಿನಗೆ ಸಂಪೂರ್ಣ ಹಣವನ್ನು ಕೊಟ್ಟು ಸಾಲ ತೀರಿಸುತ್ತೇನೆಂದು’ ಹೇಳಿದನು. ಅರಸನು ಆ ಸೇವಕನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.”

OBS Image

“ಆದರೆ ಆ ಸೇವಕನು ಅರಸನ ಬಳಿಯಿಂದ ಹೊರಟು ಹೋದಾಗ, ತನಗೆ ನಾಲ್ಕು ತಿಂಗಳುಗಳ ಸಂಬಳದಷ್ಟು ಸಾಲವನ್ನು ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲವನ್ನು ತೀರಿಸು’ ಎಂದು ಹೇಳಿದನು”

OBS Image

“ಅವನ ಜೊತೆ ಸೇವಕನು ಮೊಣಕಾಲೂರಿ, ‘ದಯವಿಟ್ಟು, ನನ್ನ ಮೇಲೆ ತಾಳ್ಮೆಯಿರಲಿ ನಾನು ನಿನಗೆ ಸಂಪೂರ್ಣ ಹಣವನ್ನು ಕೊಟ್ಟು ಸಾಲ ತೀರಿಸುತ್ತೇನೆಂದು’ ಹೇಳಿದನು. ಆದರೆ ಅವನು ಒಪ್ಪದೆ ಆ ಸಾಲ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.”

OBS Image

“ಇತರ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು, ತಮ್ಮ ಅರಸನ ಬಳಿಗೆ ಹೋಗಿ ನಡೆದದ್ದನ್ನೆಲ್ಲಾ ಆತನಿಗೆ ತಿಳಿಸಿದರು.”

OBS Image

“ಅರಸನು ಅವನನ್ನು ಕರೆಯಿಸಿ, ‘ದುಷ್ಟ ಸೇವಕನೇ! ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನು. ನೀನು ಸಹ ಅದನ್ನೇ ಮಾಡಬೇಕಾಗಿತ್ತು. ಎಂದು ಹೇಳಿದನು. ನಂತರ ಅರಸನು ಸಿಟ್ಟುಗೊಂಡು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಆ ಸೇವಕನನ್ನು ಸೆರೆಮನೆಗೆ ಹಾಕಿಸಿದನು.”

OBS Image

ಆಗ ಯೇಸು, “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನಿಗೆ ಹೃದಯಪೂರ್ವಕವಾಗಿ ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ನಿಮಗೂ ಹಾಗೆಯೇ ಮಾಡುವನು” ಎಂದು ಹೇಳಿದನು.

ಸತ್ಯವೇದದ ಕಥೆ: ಮತ್ತಾಯ 18:21-35