kn_obs/content/15.md

11 KiB

15. ವಾಗ್ದತ್ತ ದೇಶ

OBS Image

ಕೊನೆಗೂ ಇಸ್ರಾಯೇಲ್ಯರು ವಾಗ್ದತ್ತ ದೇಶವಾದ ಕಾನಾನ್ ದೇಶವನ್ನು ಪ್ರವೇಶಿಸುವ ಸಮಯ ಬಂದಿತ್ತು. ಆ ದೇಶದಲ್ಲಿ ಯೆರಿಕೋ ಎಂಬ ಪಟ್ಟಣವಿತ್ತು. ಅದರ ಸುತ್ತಲೂ ಅದನ್ನು ಕಾಪಾಡುವಂಥ ಬಲವಾದ ಗೋಡೆಗಳನ್ನು ಅದಕ್ಕಿದ್ದವು. ಯೆಹೋಶುವನು ಇಬ್ಬರು ಗೂಢಚಾರರನ್ನು ಆ ಪಟ್ಟಣಕ್ಕೆ ಕಳುಹಿಸಿದನು. ಆ ಪಟ್ಟಣದಲ್ಲಿ ರಾಹಾಬ್ ಎಂಬ ವೇಶ್ಯೆಯೊಬ್ಬಳು ವಾಸಿಸುತ್ತಿದ್ದಳು. ಅವಳು ಈ ಗೂಢಚಾರರನ್ನು ಅಡಗಿಸಿಟ್ಟಳು, ಅನಂತರ ಅವರು ಪಟ್ಟಣದಿಂದ ತಪ್ಪಿಸಿಕೊಂಡು ಹೋಗುವಂತೆ ಸಹಾಯ ಮಾಡಿದಳು. ಅವಳು ದೇವರನ್ನು ನಂಬಿದ್ದರಿಂದ ಆಕೆ ಹೀಗೆ ಮಾಡಿದ್ದಳು. ಇಸ್ರಾಯೇಲ್ಯರು ಯೆರಿಕೋವನ್ನು ನಾಶಪಡಿಸುವಾಗ ರಾಹಾಬಳನ್ನು ಮತ್ತು ಅವಳ ಕುಟುಂಬವನ್ನು ಸಂರಕ್ಷಿಸುವುದಾಗಿ ಅವರು ಮಾತು ಕೊಟ್ಟರು.

OBS Image

ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕಾಗಿ ಇಸ್ರಾಯೇಲ್ಯರು ಯೊರ್ದನ್ ನದಿಯನ್ನು ದಾಟಬೇಕಾಗಿತ್ತು. ದೇವರು ಯೆಹೋಶುವನಿಗೆ, "ಯಾಜಕರು ಮೊದಲು ಹೊರಡಬೇಕು" ಎಂದು ಹೇಳಿದನು. ಯಾಜಕರು ಯೊರ್ದನ್ ನದಿಗೆ ಕಾಲಿಡಲು ಪ್ರಾರಂಭಿಸಿದಾಗ, ಮೇಲಣಿಂದ ಹರಿದುಬರುತ್ತಿದ್ದ ನೀರು ನಿಂತುಹೋಯಿತು, ಆದ್ದರಿಂದ ಇಸ್ರಾಯೇಲ್ಯರು ಒಣ ನೆಲದ ಮೇಲೆ ನಡೆದು ನದಿಯ ಇನ್ನೊಂದು ಕಡೆಗೆ ದಾಟಿಹೋಗಲು ಸಾಧ್ಯವಾಯಿತು.

OBS Image

ಜನರು ಯೊರ್ದನ್ ನದಿಯನ್ನು ದಾಟಿದ ನಂತರ, ಯೆರಿಕೋ ಪಟ್ಟಣವು ಬಲಿಷ್ಠವಾಗಿದ್ದರೂ ಸಹ ಅದರ ಮೇಲೆ ಯುದ್ಧಮಾಡಲು ಸಿದ್ಧರಾಗಬೇಕೆಂದು ದೇವರು ಯೆಹೋಶುವನಿಗೆ ಹೇಳಿದನು. ಆರು ದಿನಗಳ ಕಾಲ ದಿನಕ್ಕೆ ಒಂದು ಬಾರಿ ಅವರ ಯಾಜಕರು ಮತ್ತು ಸೈನಿಕರು ಪಟ್ಟಣವನ್ನು ಸುತ್ತಬೇಕೆಂದು ದೇವರು ಜನರಿಗೆ ಹೇಳಿದನು. ಆದ್ದರಿಂದ ಯಾಜಕರು ಮತ್ತು ಸೈನಿಕರು ಅದನ್ನು ಮಾಡಿದರು.

OBS Image

ಏಳನೆಯ ದಿನದಲ್ಲಿ ಇಸ್ರಾಯೇಲ್ಯರು ಈ ಪಟ್ಟಣವನ್ನು ಏಳು ಬಾರಿ ಸುತ್ತಿದರು. ಏಳನೇ ಬಾರಿ ಅವರು ಪಟ್ಟಣವನ್ನು ಸುತ್ತಿ ಬಂದ ನಂತರ, ಯಾಜಕರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ಸೈನಿಕರು ಆರ್ಭಟಿಸಿದರು.

OBS Image

ಆಗ ಯೆರಿಕೋವಿನ ಸುತ್ತಲಿದ್ದ ಗೋಡೆಗಳು ಬಿದ್ದುಹೋದವು! ದೇವರು ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ಪಟ್ಟಣದಲ್ಲಿದ್ದ ಎಲ್ಲವನ್ನೂ ನಾಶಮಾಡಿದರು. ಅವರು ಇಸ್ರಾಯೇಲ್ಯರ ಭಾಗವಾಗಿ ಮಾರ್ಪಾಟ್ಟಂಥ ರಾಹಾಬಳನ್ನು ಮತ್ತು ಅವಳ ಕುಟುಂಬವನ್ನು ಮಾತ್ರ ಉಳಿಸಿ ಕಾಪಾಡಿದರು. ಇಸ್ರಾಯೇಲ್ಯರು ಯೆರಿಕೋವನ್ನು ನಾಶಮಾಡಿದ್ದಾರೆಂದು ಕಾನಾನಿನಲ್ಲಿ ವಾಸಿಸುತ್ತಿದ್ದ ಇತರ ಜನರು ಕೇಳಿದಾಗ, ಇಸ್ರಾಯೇಲ್ಯರು ತಮ್ಮ ಮೇಲೆಯೂ ಸಹ ಯುದ್ಧಮಾಡಬಹುದೆಂದು ಅವರು ಹೆದರಿದರು.

OBS Image

ಕಾನಾನಿನಲ್ಲಿರುವ ಯಾವುದೇ ಜನಾಂಗಗಳೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದನು. ಆದರೆ ಕಾನಾನ್ಯರ ಜನಾಂಗಗಳಲ್ಲಿ ಒಂದಾದ ಗಿಬ್ಯೋನ್ಯರು ಎಂದು ಕರೆಯಲ್ಪಡುವ ಜನಾಂಗವು ಯೆಹೋಶುವನಿಗೆ ತಾವು ಕಾನಾನಿನಿಂದ ದೂರದಲ್ಲಿರುವ ಸ್ಥಳದಿಂದ ಬಂದವರು ಎಂದು ಸುಳ್ಳು ಹೇಳಿದರು. ಅವರು ತಮ್ಮೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಯೆಹೋಶುವನನ್ನು ಕೇಳಿಕೊಂಡರು. ಯೆಹೋಶುವನು ಮತ್ತು ಇಸ್ರಾಯೇಲ್ಯರ ಇತರ ನಾಯಕರು ತಾವು ಏನು ಮಾಡಬೇಕೆಂದು ದೇವರನ್ನು ವಿಚಾರಿಸಲಿಲ್ಲ. ಬದಲಾಗಿ ಅವರು ಗಿಬ್ಯೋನ್ಯರೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಂಡರು.

OBS Image

ಮೂರು ದಿನಗಳ ನಂತರ, ಗಿಬ್ಯೋನ್ಯರು ನಿಜವಾಗಿಯೂ ಕಾನಾನಿನಲ್ಲಿ ವಾಸಿಸುತ್ತಿದ್ದಾರೆಂದು ಇಸ್ರಾಯೇಲ್ಯರು ಕಂಡುಕೊಂಡರು. ಗಿಬ್ಯೋನ್ಯರು ಅವರನ್ನು ಮೋಸಗೊಳಿಸಿದ್ದರಿಂದ ಅವರು ಕೋಪಗೊಂಡಿದ್ದರು. ಆದರೆ ಅವರು ಅವರೊಂದಿಗೆ ಮಾಡಿಕೊಂಡ ಸಮಾಧಾನದ ಒಪ್ಪಂದವನ್ನು ಪಾಲಿಸಿದ್ದರು ಏಕೆಂದರೆ ಅವರು ದೇವರ ಮುಂದೆ ಮಾತು ಕೊಟ್ಟಿದ್ದರು. ಸ್ವಲ್ಪ ಕಾಲವಾದ ನಂತರ, ಗಿಬ್ಯೋನ್ಯರು ಇಸ್ರಾಯೇಲ್ಯರೊಂದಿಗೆ ಸಮಾಧಾನ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಕಾನಾನಿನಲ್ಲಿರುವ ಅಮೋರಿಯರೆಂಬ ಬೇರೊಂದು ಜನಾಂಗದ ರಾಜರು ಕೇಳಿಸಿಕೊಂಡರು, ಅದರ ನಿಮಿತ್ತವಾಗಿ ಅವರು ತಮ್ಮ ಸೈನ್ಯವನ್ನು ಒಂದು ದೊಡ್ಡ ಸೈನ್ಯವಾಗಿ ಒಟ್ಟುಗೂಡಿಸಿ ಗಿಬ್ಯೋನಿಗೆ ಮುತ್ತಿಗೆಹಾಕಿ ಯುದ್ಧಮಾಡಿದರು. ಗಿಬ್ಯೋನ್ಯರು ಬಂದು ಸಹಾಯ ಮಾಡಬೇಕೆಂಬ ಸಂದೇಶವನ್ನು ಯೆಹೋಶುವನಿಗೆ ಕಳುಹಿಸಿದರು.

OBS Image

ಆದ್ದರಿಂದ ಯೆಹೋಶುವನು ಇಸ್ರಾಯೇಲ್ಯರ ಸೈನ್ಯವನ್ನು ಒಟ್ಟುಗೂಡಿಸಿದನು ಮತ್ತು ಅವರು ಗಿಬ್ಯೋನ್ಯರ ಬಳಿಗೆ ಹೋಗಲು ರಾತ್ರಿಯೆಲ್ಲಾ ಪ್ರಯಾಣಮಾಡಿದರು. ಮುಂಜಾನೆಯಲ್ಲಿ ಅವರು ಅಮೋರಿಯರ ಸೈನ್ಯವನ್ನು ಅಚ್ಚರಿಗೊಳಿಸಿ ಅವರ ಮೇಲೆ ಆಕ್ರಮಣ ಮಾಡಿದರು.

OBS Image

ಆ ದಿನದಲ್ಲಿ ದೇವರು ಇಸ್ರಾಯೇಲಿಗಾಗಿ ಯುದ್ಧಮಾಡಿದನು. ಆತನು ಅಮೋರಿಯರನ್ನು ಕಳವಳಗೊಳ್ಳಿಸಿದನು ಮತ್ತು ಆತನು ದೊಡ್ಡ ಆಲಿಕಲ್ಲಿನ ಮಳೆಯನ್ನು ಸುರಿಸಿ ಬಹಳ ಮಂದಿ ಅಮೋರಿಯರನ್ನು ಸಾಯಿಸಿದನು.

OBS Image

ಇಸ್ರಾಯೇಲ್ಯರು ಅಮೋರಿಯರನ್ನು ಸಂಪೂರ್ಣವಾಗಿ ಸೋಲಿಸಲು ಸಾಕದಷ್ಟು ಸಮಯ ದೊರಕುವಂತೆ ದೇವರು ಸೂರ್ಯನನ್ನು ಆಕಾಶದಲ್ಲಿ ಒಂದು ಕಡೆ ನಿಲ್ಲಿಸಿಬಿಟ್ಟನು. . ಆ ದಿನದಲ್ಲಿ ದೇವರು ಇಸ್ರಾಯೇಲ್ಯರಿಗೆ ಮಹಾ ಜಯವನ್ನುಂಟುಮಾಡಿದನು.

OBS Image

ದೇವರು ಆ ಸೈನ್ಯಗಳನ್ನು ಸೋಲಿಸಿದ ನಂತರ, ಕಾನಾನ್ಯರ ಇತರ ಜನಾಂಗಗಳು ಇಸ್ರಾಯೇಲ್ ಮೇಲೆ ಆಕ್ರಮಣ ಮಾಡಲು ಒಟ್ಟುಗೂಡಿದರು. ಯೆಹೋಶುವನು ಮತ್ತು ಇಸ್ರಾಯೇಲ್ಯರು ಅವರ ಮೇಲೆ ಯುದ್ಧಮಾಡಿ ಅವರನ್ನು ಸಂಹರಿಸಿಬಿಟ್ಟರು.

OBS Image

ಈ ಯುದ್ಧಗಳಾದ ನಂತರ, ದೇವರು ವಾಗ್ದತ್ತ ದೇಶದ ಒಂದೊಂದು ಭಾಗವನ್ನು ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸ್ವಂತವಾಗಿ ಕೊಟ್ಟನು. ಅನಂತರ ದೇವರು ಇಸ್ರಾಯೇಲ್ಯರಿಗೆ ಅದರ ಸುತ್ತಣ ಎಲ್ಲಾ ಮೇರೆಗಳಲ್ಲಿಯೂ ಸಮಾಧಾನವನ್ನು ಕೊಟ್ಟನು.

OBS Image

ಯೆಹೋಶುವನು ವೃದ್ಧನಾದಾಗ ಅವನು ಇಸ್ರಾಯೇಲ್ ಜನರೆಲ್ಲರನ್ನು ಒಟ್ಟಾಗಿ ಕರೆಯಿಸಿದನು. ದೇವರು ಸೀನಾಯಿ ಬೆಟ್ಟದಲ್ಲಿ ಇಸ್ರಾಯೇಲ್ಯರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅನುಸರಿಸುವೆವು ಎಂದು ಅವರು ಕೊಟ್ಟಂಥ ಮಾತು ಯೆಹೋಶುವನು ಜನರಿಗೆ ನೆನಪಿಸಿದನು. ಆಗ ಜನರು ತಾವು ದೇವರಿಗೆ ನಂಬಿಗಸ್ತರಾಗಿರುವೆವು ಮತ್ತು ಆತನ ನಿಯಮಗಳಿಗೆ ವಿಧೇಯರಾಗಿರುವೆವು ಎಂದು ಮಾತು ಕೊಟ್ಟರು.

ಸತ್ಯವೇದದ ಕಥೆ: ಯೆಹೋಶುವ 1-24