kn_obs/content/10.md

7.8 KiB

10. ಹತ್ತು ಬಾಧೆಗಳು

OBS Image

ಫರೋಹನು ಮೊಂಡನಾಗಿರುತ್ತಾನೆ ಎಂದು ದೇವರು ಮೋಶೆ ಮತ್ತು ಆರೋನರಿಗೆ ಎಚ್ಚರಿಕೆ ಕೊಟ್ಟನು. ಅವರು ಫರೋಹನ ಬಳಿಗೆ ಹೋದಾಗ ಅವರು, "ನನ್ನ ಜನರು ಹೊರಟುಹೋಗುವಂತೆ ಬಿಡು ಎಂದು ಇಸ್ರಾಯೇಲಿನ ದೇವರಾದ ಯೆಹೋವನು ಹೇಳುತ್ತಾನೆ" ಎಂದು ಹೇಳಿದರು. ಆದರೆ ಫರೋಹನು ಅವರಿಗೆ ಕಿವಿಗೊಡಲಿಲ್ಲ. ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಅವಕಾಶ ಕೊಡುವುದಕ್ಕೆ ಬದಲಾಗಿ, ಅವರನ್ನು ಇನ್ನಷ್ಟು ಕಠಿಣವಾಗಿ ಕೆಲಸ ಮಾಡುವಂತೆ ಬಲಾತ್ಕರಿಸಿದನು!

OBS Image

ಫರೋಹನು ಜನರನ್ನು ಹೊರಟುಹೋಗುವಂತೆ ಬಿಟ್ಟುಬಿಡಲು ನಿರಾಕರಿಸುತ್ತಿದ್ದನು, ಆದ್ದರಿಂದ ದೇವರು ಈಜಿಪ್ಟಿನ ಮೇಲೆ ಹತ್ತು ದೊಡ್ಡ ಬಾಧೆಗಳನ್ನು ಕಳುಹಿಸಿದನು. ಈ ಬಾಧೆಗಳ ಮೂಲಕ, ದೇವರು ತಾನು ಫರೋಹನಿಗಿಂತಲೂ ಮತ್ತು ಈಜಿಪ್ಟಿನ ಸರ್ವ ದೇವರುಗಳಿಗಿಂತಲೂ ಅಧಿಕ ಶಕ್ತಿಶಾಲಿ ಎಂದು ಫರೋಹನಿಗೆ ತೋರಿಸಿದನು.

OBS Image

ದೇವರು ನೈಲ್ ನದಿಯನ್ನು ರಕ್ತವಾಗಿ ಮಾರ್ಪಾಡಿಸಿದನು, ಆದರೂ ಫರೋಹನು ಇಸ್ರಾಯೇಲ್ಯರನ್ನು ಹೊರಟುಹೋಗಲು ಬಿಡಲಿಲ್ಲ.

OBS Image

ದೇವರು ಈಜಿಪ್ಟಿನ ಮೇಲೆಲ್ಲಾ ಕಪ್ಪೆಗಳನ್ನು ಬರಮಾಡಿದನು. ಕಪ್ಪೆಗಳನ್ನು ತೊಲಗಿಸಬೇಕು ಎಂದು ಫರೋಹನು ಮೋಶೆಯನ್ನು ಬೇಡಿಕೊಂಡನು. ಆದರೆ ಕಪ್ಪೆಗಳೆಲ್ಲವು ಸತ್ತುಹೋದ ನಂತರ, ಫರೋಹನು ತನ್ನ ಹೃದಯವನ್ನು ಕಠಿಣಮಾಡಿಕೊಂಡನು ಮತ್ತು ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟು ಹೊರಟುಹೋಗಲು ಬಿಡಲಿಲ್ಲ.

OBS Image

ಆದುದರಿಂದ ದೇವರು ಹೇನುಗಳ ಬಾಧೆಯನ್ನು ಬರಮಾಡಿದನು. ನಂತರ ಆತನು ನೊಣಗಳ ಬಾಧೆಯನ್ನು ಬರಮಾಡಿದನು. ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, ಈ ಬಾಧೆಯನ್ನು ನಿಲ್ಲಿಸಿದರೆ ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟು ಹೋಗಬಹುದೆಂದು ಅವರಿಗೆ ಹೇಳಿದನು. ಮೋಶೆಯು ಪ್ರಾರ್ಥಿಸಿದಾಗ, ದೇವರು ಈಜಿಪ್ಟಿನಿಂದ ಎಲ್ಲಾ ನೊಣಗಳನ್ನು ತೊಲಗಿಸಿದನು. ಆದರೆ ಫರೋಹನು ತನ್ನ ಹೃದಯವನ್ನು ಕಠಿಣಮಾಡಿಕೊಂಡನು ಮತ್ತು ಜನರು ಬಿಡುಗಡೆಯಾಗಿ ಹೊರಟುಹೋಗಲು ಒಪ್ಪಲಿಲ್ಲ.

OBS Image

ಅನಂತರ, ದೇವರು ಈಜಿಪ್ಟಿನವರಿಗೆ ಸೇರಿದ ಎಲ್ಲಾ ಪ್ರಾಣಿಗಳು ವ್ಯಾಧಿಯಿಂದ ಸಾಯುವಂತೆ ಮಾಡಿದನು. ಆದರೆ ಫರೋಹನ ಹೃದಯವು ಕಠಿಣವಾಯಿತ್ತು ಅವನು ಇಸ್ರಾಯೇಲ್ಯರನ್ನು ಹೊರಟುಹೋಗಲು ಬಿಡಲಿಲ್ಲ.

OBS Image

ಆಗ ಫರೋಹನ ಎದುರಿನಲ್ಲಿ ಬೂದಿಯನ್ನು ಗಾಳಿಯಲ್ಲಿ ತೂರಬೇಕೆಂದು ದೇವರು ಮೋಶೆಗೆ ಹೇಳಿದನು. ಅವನು ಅದನ್ನು ಮಾಡಿದ ನಂತರ, ಈಜಿಪ್ಟಿನವರ ಚರ್ಮದ ಮೇಲೆ ಘೋರವಾದ ಹುಣ್ಣುಗಳು ಕಾಣಿಸಿಕೊಂಡವು, ಆದರೆ ಇಸ್ರಾಯೇಲ್ಯರ ಮೇಲೆ ಅವು ಬರಲಿಲ್ಲ. ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದನು ಮತ್ತು ಫರೋಹನು ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಅಪ್ಪಣೆ ಕೊಡಲಿಲ್ಲ.

OBS Image

ಅದರ ನಂತರ, ದೇವರು ಈಜಿಪ್ಟಿನ ಬಹುತೇಕ ಬೆಳೆಗಳನ್ನು ನಾಶಪಡಿಸುವಂತ ಮತ್ತು ಹೊರಗೆ ಹೋದವರನ್ನು ಸಾಯಿಸುವಂತ ಆಲಿಕಲ್ಲಿನ ಮಳೆಯನ್ನು ಬರಮಾಡಿದನು. ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, "ನಾನು ಪಾಪಮಾಡಿದ್ದೇನೆ, ನೀನು ಹೋಗಬಹುದು" ಎಂದು ಹೇಳಿದನು. ಆದ್ದರಿಂದ ಮೋಶೆಯು ಪ್ರಾರ್ಥಿಸಿದನು, ಮತ್ತು ಆಕಾಶದಿಂದ ಆಲಿಕಲ್ಲು ಬೀಳುವುದು ನಿಂತುಹೋಯಿತು.

OBS Image

ಆದರೆ ಫರೋಹನು ಪುನಃ ಪಾಪಮಾಡಿದನು ಮತ್ತು ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು. ಅವನು ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಬಿಡಲಿಲ್ಲ.

OBS Image

ಆದ್ದರಿಂದ ದೇವರು ಈಜಿಪ್ಟಿನ ಮೇಲೆ ಮಿಡತೆಗಳ ಗುಂಪು ಬರುವಂತೆ ಮಾಡಿದನು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದೆಲ್ಲವನ್ನು ಮಿಡತೆಗಳು ತಿಂದುಬಿಟ್ಟವು.

OBS Image

ನಂತರ ದೇವರು ಮೂರು ದಿನಗಳ ಕಾಲವಿರುವಂಥ ಕತ್ತಲೆಯನ್ನು ಬರಮಾಡಿದನು. ಈಜಿಪ್ಟಿನವರು ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಹೋಗಲಾರದಷ್ಟರ ಮಟ್ಟಿಗೆ ಬಹಳ ಕತ್ತಲಾಗಿತ್ತು. ಆದರೆ ಇಸ್ರಾಯೇಲ್ಯರು ವಾಸವಾಗಿದ್ದ ಕಡೆಯಲ್ಲಿ ಬೆಳಕು ಇತ್ತು.

OBS Image

ಈ ಒಂಭತ್ತು ಬಾಧೆಗಳ ನಂತರವೂ, ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಫರೋಹನು ನಿರಾಕರಿಸಿದನು. ಫರೋಹನು ಕಿವಿಗೊಡದ ಕಾರಣ, ಇನ್ನೊಂದು ಕೊನೆಯ ಬಾಧೆಯನ್ನು ಕಳುಹಿಸಲು ದೇವರು ಯೋಜಿಸಿದನು. ಇದು ಫರೋಹನ ಮನಸ್ಸನ್ನು ಬದಲಾಯಿಸುವಂಥದ್ದಾಗಿತ್ತು.

ಸತ್ಯವೇದದ ಕಥೆ: ವಿಮೋಚನಕಾಂಡ 5-10