kn_obs/content/04.md

7.9 KiB

4. ಅಬ್ರಹಾಮನೊಂದಿಗಿನ ದೇವರ ಒಡಂಬಡಿಕೆ

OBS Image

ಜಲಪ್ರಳಯವಾಗಿ ಹಲವು ವರ್ಷಗಳಾದ ನಂತರ, ಲೋಕದಲ್ಲಿ ಮತ್ತೊಮ್ಮೆ ಜನರು ಹೆಚ್ಚುತ್ತಾ ಇದ್ದರು, ಅವರು ಪುನಃ: ದೇವರಿಗೂ ಮತ್ತು ಇತರರಿಗೂ ವಿರುದ್ಧವಾಗಿ ಪಾಪ ಮಾಡಿದರು. ಅವರೆಲ್ಲರು ಒಂದೇ ಭಾಷೆಯನ್ನು ಮಾತನಾಡುತ್ತಿದ್ದರಿಂದ, ಅವರು ಒಟ್ಟಾಗಿ ಕೂಡಿಕೊಂಡರು ಮತ್ತು ದೇವರು ಆಜ್ಞಾಪಿಸಿದಂತೆ ಭೂಮಿಯನ್ನು ತುಂಬಿಕೊಳ್ಳುವ ಬದಲು ಒಂದು ಪಟ್ಟಣವನ್ನು ಕಟ್ಟಿದರು.

OBS Image

ಅವರು ಬಹಳ ಅಹಂಕಾರಿಗಳಾಗಿದ್ದರು ಮತ್ತು ಅವರು ಹೇಗೆ ಜೀವಿಸಬೇಕು ಎಂಬುದರ ಕುರಿತಾದ ದೇವರ ಆಜ್ಞೆಗಳನ್ನು ಅನುಸರಿಸಲು ಅವರು ಬಯಸಲಿಲ್ಲ. ಅವರು ಆಕಾಶವನ್ನು ಮುಟ್ಟುವಂಥ ಎತ್ತರದ ಗೋಪುರವನ್ನು ಕಟ್ಟಲು ಪ್ರಾರಂಭಿಸಿದರು. ಅವರು ಕೆಟ್ಟದ್ದನ್ನು ಮಾಡಲು ಒಟ್ಟಾಗಿ ಕೆಲಸ ಮಾಡುವುದಾದರೆ, ಅವರು ಹೆಚ್ಚೆಚ್ಚು ಪಾಪದ ಕೆಲಸಗಳನ್ನು ಮಾಡಬಹುದೆಂದು ದೇವರು ತಿಳಿದನು.

OBS Image

ಆದ್ದರಿಂದ ದೇವರು ಅವರ ಭಾಷೆಯನ್ನು ಬೇರೆ ಬೇರೆ ಭಾಷೆಗಳನ್ನಾಗಿ ಬದಲಾಯಿಸಿದನು ಮತ್ತು ಲೋಕದಾದ್ಯಂತ ಜನರನ್ನು ಚದುರಿಸಿಬಿಟ್ಟನು. ಅವರು ಕಟ್ಟಲು ಆರಂಭಿಸಿದ ಪಟ್ಟಣವನ್ನು ಬಾಬೆಲ್ ಎಂದು ಕರೆಯಲಾಗುತ್ತಿತ್ತು, "ಗಲಿಬಿಲಿ" ಎಂಬುದು ಇದರರ್ಥವಾಗಿದೆ.

OBS Image

ನೂರಾರು ವರ್ಷಗಳ ನಂತರ, ದೇವರು ಅಬ್ರಾಮ್ ಎಂಬ ಮನುಷ್ಯನೊಂದಿಗೆ ಮಾತಾಡಿದನು. ದೇವರು ಅವನಿಗೆ, "ನೀನು ಸ್ವದೇಶವನ್ನೂ ಮತ್ತು ಕುಟುಂಬವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸುವೆನು. ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನಿನ್ನನ್ನು ಹರಸುವವರನ್ನು ಹರಸುವೆನು;ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ನಿಮಿತ್ತವಾಗಿ ಭೂಲೋಕದ ಎಲ್ಲಾ ಕುಟುಂಬದವರಿಗೂ ಆಶೀರ್ವಾದವುಂಟಾಗುವುದು" ಎಂದು ಹೇಳಿದನು.

OBS Image

ಅಬ್ರಾಮನು ದೇವರಿಗೆ ವಿಧೇಯರಾದನು. ಅವನು ತನ್ನ ಹೆಂಡತಿಯಾದ ಸಾರಯಳನ್ನು, ತನ್ನ ಎಲ್ಲಾ ಸೇವಕರೊಂದಿಗೆ ಮತ್ತು ಅವನ ಒಡೆತನದಲ್ಲಿದ್ದ ಎಲ್ಲವುಗಳನ್ನು ತೆಗೆದುಕೊಂಡು, ದೇವರು ಅವನಿಗೆ ತೋರಿಸಿದ ಕಾನಾನ್ ದೇಶಕ್ಕೆ ಹೊರಟುಹೋದನು.

OBS Image

ಅಬ್ರಾಮನು ಕಾನಾನಿಗೆ ಬಂದಾಗ ದೇವರು "ನಿನ್ನ ಸುತ್ತಲೂ ನೋಡು, ನಾನು ಈ ದೇಶವನ್ನೆಲ್ಲಾ ನಿನಗೆ ಕೊಡುವೆನು, ನಿನ್ನ ಸಂತತಿಯು ಯಾವಾಗಲೂ ಅದನ್ನು ಸ್ವಾಧೀನಪಡಿಸಿಕೊಳ್ಳುವುದು" ಎಂದು ಹೇಳಿದನು. ನಂತರ ಅಬ್ರಾಮನು ಆ ದೇಶದಲ್ಲಿ ನೆಲೆಸಿದನು.

OBS Image

ಪರಾತ್ಪರನಾದ ದೇವರ ಯಾಜಕನಾದ ಮೆಲ್ಕೀಚೆದೆಕನು ಎಂಬ ಓರ್ವ ಮನುಷ್ಯನಿದ್ದನು. ಒಂದು ದಿನ ಯುದ್ದವಾದ ನಂತರ, ಅವನು ಅಬ್ರಾಮನನ್ನು ಭೇಟಿಯಾದರು. ಮೆಲ್ಕೀಚೆದೆಕನು ಅಬ್ರಾಮನನ್ನು ಆಶೀರ್ವದಿಸಿ, "ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರು ಅಬ್ರಾಮನನ್ನು ಆಶೀರ್ವದಿಸಲಿ" ಎಂದು ಹೇಳಿದನು. ನಂತರ ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು.

OBS Image

ಅನೇಕ ವರ್ಷಗಳು ಕಳೆದುಹೋದವು, ಆದರೆ ಅಬ್ರಾಮ್ ಮತ್ತು ಸಾರಯಳಿಗೆ ಇನ್ನೂ ಮಗನಿರಲಿಲ್ಲ. ದೇವರು ಅಬ್ರಾಮನೊಂದಿಗೆ ಮಾತನಾಡಿ, ಅವನು ಮಗನನ್ನು ಪಡೆಯುವನು ಮತ್ತು ಆಕಾಶದಲ್ಲಿರುವ ನಕ್ಷತ್ರಗಳಂತೆ ಅನೇಕ ವಂಶಸ್ಥರನ್ನು ಪಡೆಯುವನು ಎಂದು ಪುನಃ ವಾಗ್ದಾನ ಮಾಡಿದನು. ಅಬ್ರಾಮನು ದೇವರ ವಾಗ್ದಾನವನ್ನು ನಂಬಿದ್ದನು. ಅಬ್ರಾಮನು ದೇವರ ವಾಗ್ದಾನವನ್ನು ನಂಬಿದ್ದರಿಂದ ದೇವರು ಅವನನ್ನು ನೀತಿವಂತನೆಂದು ಘೋಷಿಸಿದನು.

OBS Image

ಆಗ ದೇವರು ಅಬ್ರಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಸಾಮಾನ್ಯವಾಗಿ, ಒಡಂಬಡಿಕೆಯು ಇಬ್ಬರು ವ್ಯಕ್ತಿಗಳು ಪರಸ್ಪರ ಒಬ್ಬರಿಗೊಬ್ಬರು ಕೆಲಸಗಳನ್ನು ಮಾಡುವುದಕ್ಕಾಗಿ ತಮ್ಮ ನಡುವೆ ಮಾಡಿಕೊಳ್ಳುವಂಥ ಒಪ್ಪಂದವಾಗಿದೆ. ಆದರೆ ಈ ಸಂಗತಿಯಲ್ಲಿ, ಅಬ್ರಾಮನು ಗಾಢವಾದ ನಿದ್ರೆಯಲ್ಲಿದ್ದಾಗ ದೇವರು ಅಬ್ರಾಮನಿಗೆ ವಾಗ್ದಾನ ಮಾಡಿದನು, ಆದರೂ ಅವನು ದೇವರ ಸ್ವರವನ್ನು ಕೇಳಲು ಸಾಧ್ಯವಾಯಿತು. ದೇವರು ಅವನಿಗೆ, "ನಾನು ನಿನ್ನ ಮೂಲಕವಾಗಿಯೇ ನಿನಗೆ ಒಬ್ಬ ಮಗನನ್ನು ಕೊಡುವೆನು, ನಿನ್ನ ಸಂತತಿಗೆ ನಾನು ಕಾನಾನ್ ದೇಶವನ್ನು ಕೊಡುವೆನು" ಎಂದು ವಾಗ್ದಾನ ಮಾಡಿದನು. ಆದರೆ ಅಬ್ರಾಮನಿಗೆ ಇನ್ನೂ ಮಗನಿರಲಿಲ್ಲ.

ಸತ್ಯವೇದದ ಕಥೆ: ಆದಿಕಾಂಡ 11-15